ಗ್ರಾಪಂಗಳಲ್ಲಿ 100 ಸೇವೆಗಳು ಲಭ್ಯ
ಜು.25ರಂದು ‘ಬಾಪೂಜಿ ಸೇವಾ ಕೇಂದ್ರ’ಕ್ಕೆ ಸಚಿವರಿಂದ ಚಾಲನೆ
ಕಾರವಾರ, ಜು.22: ಇನ್ನು ಮುಂದೆ ಪಹಣಿ ಪತ್ರಿಕೆ ಪಡೆಯಲು ನಾಡ ಕಚೇರಿಗಳಿಗೆ ತೆರಳುವ ಅಗತ್ಯವಿಲ್ಲ. ಜಿಲ್ಲೆಯ ಎಲ್ಲ 231 ಗ್ರಾಮ ಪಂಚಾಯತ್‌ಗಳಲ್ಲಿ ಪಹಣಿ ಪತ್ರಿಕೆ ಒದಗಿಸುವ ಸೌಲಭ್ಯ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಪಹಣಿ ಪತ್ರಿಕೆ ಪಡೆಯಲು ನಾಡ ಕಚೇರಿಗಳಿಗೆ ತೆರಳಿ ಸೇವೆ ಪಡೆಯಲು ಆಗುತ್ತಿರುವ ವಿಳಂಬವನ್ನು ತಪ್ಪಿಸಲು ಸರಕಾರ ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರ್‌ಟಿಸಿ ನೀಡುವ ಸೌಲಭ್ಯವನ್ನು ಆರಂಭಿಸಿದೆ. ಇದಕ್ಕಾಗಿ ಎಲ್ಲ ಗ್ರಾಮ ಪಂಚಾಯತ್‌ಗಳಿಗೆ ಅನುಕೂಲವಾಗುವಂತೆ ತಲಾ 200 ನಿಗದಿತ ನಮೂನೆಯ ಮುದ್ರಿತ ಪ್ರತಿಗಳನ್ನು ಒದಗಿಸಿದೆ ಎಂದು ಅವರು ಹೇಳಿದ್ದಾರೆ. ಬಾಪೂಜಿ ಸೇವಾ ಕೇಂದ್ರ
: ಕಂದಾಯ ಇಲಾಖೆಯ ಸೇವೆಗಳು, ಪಂಚಾಯತ್ ರಾಜ್ ಇಲಾಖೆ ಸೇವೆಗಳನ್ನು ಒಳಗೊಂಡಂತೆ ಸರಕಾರದಿಂದ ದೊರೆಯುವ 100 ಸೇವೆಗಳನ್ನು ಒಂದೇ ಸೂರಿನಡಿ ತರುವ 46 ಬಾಪೂಜಿ ಸೇವಾ ಕೇಂದ್ರಗಳು ಜಿಲ್ಲೆಗೆ ಮಂಜೂರಾಗಿದ್ದು, ಕಾರ್ಯಾರಂಭ ಮಾಡುತ್ತಿವೆ. ಪ್ರಥಮ ಹಂತದಲ್ಲಿ 46ಗ್ರಾಮ ಪಂಚಾಯತ್‌ಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಜುಲೈ 25ರಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಸಾಂಬ್ರಾಣಿ ಗ್ರಾಮ ಪಂಚಾಯತ್‌ನಲ್ಲಿ ಬಾಪೂಜಿ ಸೇವಾ ಕೇಂದ್ರಕ್ಕೆ ಚಾಲನೆ ನೀಡುವರು.
ಪ್ರಸ್ತುತ ಕಂದಾಯ ಇಲಾಖೆಯ ಸೇವೆಗಳು ನಾಡ ಕಚೇರಿಗಳಲ್ಲಿ ಮಾತ್ರ ಲಭ್ಯವಿದೆ. ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ಹಿಂದುಳಿದ ವರ್ಗಗಳ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ, ಆರ್‌ಟಿಸಿ, ಆದಾಯ ದೃಢೀಕರಣ ಸೇರಿದಂತೆ ಹಲವು ದೃಢೀಕರಣ ಪತ್ರಗಳು ಹಾಗೂ ಸೇವೆಗಳಿಗಾಗಿ ಜನರು ತಮ್ಮ ಗ್ರಾಮದಿಂದ ಹೋಬಳಿಗಳಲ್ಲಿರುವ ನಾಡ ಕಚೇರಿಗೆ ತೆರಳಬೇಕಾಗಿದೆ. ಇದೇ ರೀತಿ ವಸತಿ, ಕಟ್ಟಡ ಅನುಮತಿ, ಕಂದಾಯ ನಕಲು ಪ್ರತಿಗಳು, ನೀರಿನ ಸಂಪರ್ಕ ಅರ್ಜಿ, ಆಸ್ತಿ ತೆರಿಗೆ ಮನ್ನಾ ಅರ್ಜಿ, ಉಚಿತ ನಿವೇಶನ ಪಡೆಯಲು ಅರ್ಜಿ, ಭೂ ಪರಿವರ್ತನೆ ನಿರಾಕ್ಷೇಪಣ ಪತ್ರ, ಗ್ರಾಮ ಪಂಚಾಯತ್ ಆಸ್ತಿಗಳ ಬಾಡಿಗೆ ಪಾವತಿ ಸೇರಿದಂತೆ ಹಲವು ಸೇವೆಗಳು ಪಂಚಾಯತ್‌ಗಳಲ್ಲಿ ಲಭ್ಯವಿದೆ. ಇನ್ನು ಮುಂದೆ ಈ ಎಲ್ಲ ಸೇವೆಗಳು ಒಂದೇ ಸೂರಿನಡಿ ಗ್ರಾಮ ಪಂಚಾಯತ್‌ಗಳಲ್ಲಿರುವ ಬಾಪೂಜಿ ಸೇವಾ ಕೇಂದ್ರದಲ್ಲಿ ದೊರೆಯಲಿದೆ.
ಮೊಬೈಲ್ ರೀಚಾರ್ಜ್ ಸೌಲಭ್ಯ:
ಬಾಪೂಜಿ ಸೇವಾ ಕೇಂದ್ರಗಳಲ್ಲಿ ಕಂದಾಯ ಹಾಗೂ ಪಂಚಾಯತ್ ಸೇವೆಗಳು ಮಾತ್ರವಲ್ಲದೆ ಹಲವು ಗ್ರಾಹಕ ಸ್ನೇಹಿ ಸೇವೆಗಳನ್ನು ಸಹ ನೀಡಲಾಗುತ್ತಿದೆ. ಹಲವು ಬಿಲ್‌ಗಳ ಪಾವತಿಯನ್ನು ಈ ಕೇಂದ್ರದಲ್ಲಿ ಮಾಡುವ ಅವಕಾಶ ಕಲ್ಪಿಸಲಾಗಿದೆ. ವಿದ್ಯುತ್ ಬಿಲ್, ದೂರವಾಣಿ ಬಿಲ್, ಜೀವ ವಿಮೆ, ವಾಹನ ವಿಮೆ, ಮೊಬೈಲ್ ರಿಚಾರ್ಜ್, ಡಿಟಿಎಚ್, ಡಾಟಾ ಕಾರ್ಡ್ ರಿಚಾರ್ಜ್, ಬಸ್, ರೈಲು, ವಿಮಾನ ಟಿಕೆಟ್ ಬುಕ್ಕಿಂಗ್, ಹಣ ವರ್ಗಾವಣೆ ಸೇರಿದಂತೆ 17ಗ್ರಾಹಕ ಸ್ನೇಹಿ ಸೇವೆಗಳನ್ನು ಇನ್ನು ಮುಂದೆ ಗ್ರಾಮ ಪಂಚಾಯತ್‌ಗಳಲ್ಲಿರುವ ಬಾಪೂಜಿ ಸೇವಾ ಕೇಂದ್ರದಲ್ಲಿಯೇ ಪಡೆಯಬಹುದಾಗಿದೆ. ಇದಕ್ಕಾಗಿ ಗ್ರಾಮ ಪಂಚಾಯತ್‌ನ ಪಂಚತಂತ್ರ ತಂತ್ರಾಶದೊಂದಿಗೆ ನಾಡಕಚೇರಿ ತಂತ್ರಾಂಶ ಮತ್ತು ಭೂಮಿ ತಂತ್ರಾಂಶಗಳನ್ನು ಸಮಗ್ರೀಕರಣಗೊಳಿಸಲಾಗಿದೆ. ಸಾರ್ವಜನಿಕರು ಎಲ್ಲಾ ಸೇವೆಗಳನ್ನು ಪಡೆಯಲು ಬಾಪೂಜಿ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.







