ಗುಜರಾತನ್ನು ಗೂಂಡಾ ರಾಜ್ಯ ಎಂದು ಘೋಷಿಸಲಿ: ಪ್ರಸನ್ನ
ಬಿಎಸ್ಪಿಯಿಂದ ಪ್ರತಿಭಟನಾ ಸಭೆ
 mdg news ph 3.jpg)
ಮೂಡಿಗೆರೆ, ಜು.22: ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರನ್ನು ಕೀಳು ಪದ ಬಳಸಿ ನಿಂದಿಸಿರುವುದು ಸ್ತ್ರೀ ಕುಲಕ್ಕೆ ಮಾಡಿರುವ ಅವಮಾನ ಎಂದು ಬಿಎಸ್ಪಿ ಮುಖಂಡ ಮರಗುಂದ ಪ್ರಸನ್ನ ಹೇಳಿದರು.
ಅವರು ಬಿಎಸ್ಪಿ ವತಿಯಿಂದ ಶುಕ್ರವಾರ ಪಟ್ಟಣದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆೆಯಲ್ಲಿ ಮಾತನಾಡಿದರು. ಬಿಜೆಪಿಯ ಕೀಳುಮಟ್ಟದ ನೀಚ ಸಂಸ್ಕೃತಿಯಿಂದ ಹೊರಬರುವವರೆಗೆ ಆ ಪಕ್ಷ ಎಂದಿಗೂ ಉದ್ಧಾರವಾಗಲಾರದು. ಇನ್ನೊಬ್ಬರನ್ನು ಜರಿದು ಹೊಟ್ಟೆ ತುಂಬಿಸಿಕೊಳ್ಳುವ ಜಾಯಮಾನದ ಬಿಜೆಪಿಯು ತಾಕತ್ತಿದ್ದರೆ ತನ್ನದೇ ಪಕ್ಷದ ಉಚ್ಚಾಟಿತ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ಎಂಬ ಅನಾಗರಿಕನನ್ನು ಬಂಧಿಸಿ ಜೈಲಿಗಟ್ಟಲಿ ಎಂದು ಸವಾಲು ಹಾಕಿದರು.
ಜಿಲ್ಲಾಧ್ಯಕ್ಷ ಝಾಕೀರ್ ಹುಸೆನ್ ಮಾತನಾಡಿ, ಬಿಜೆಪಿ ಎಂಬ ಕೋಮುವಾದಿ ಪಕ್ಷದಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳಲು ಮಾಯಾವತಿಯವರನ್ನು ಕೀಳು ಮಟ್ಟದ ಪದ ಬಳಸಿ ನಿಂದಿಸಿರುವುದನ್ನು ಖಂಡಿಸುವುದಾಗಿ ತಿಳಿಸಿದ ಅವರು, ಈ ಬಗ್ಗೆ ವೌನ ವಹಿಸಿ ಜಾಣಕುರುಡು ಪ್ರದರ್ಶಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ದಯಾಶಂಕರ್ ಸಿಂಗ್ ವಿರುದ್ಧ ಧ್ವನಿ ಎತ್ತಲು ಹಿಂಜರಿಯುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕವಳ್ಳಿ ರಮೇಶ್ ಮಾತನಾಡಿ, ಸತ್ತ ಜಾನುವಾರಿನ ಚರ್ಮ ಸುಲಿಯುತ್ತಿದ್ದ ದಲಿತರಿಗೆ ಹಿಂದೂ ಸಂಘಟನೆಗಳ ಪುಂಡರು ಮಾರಣಾಂತಿಕ ಹಲ್ಲೆ ನಡೆಸಿ ಇಬ್ಬರ ಸಾವಿಗೆ ಕಾರಣರಾಗಿದ್ದಾರೆ. 11 ಜನ ಆಸ್ಪತ್ರೆಗೆ ಸೇರುವಂತಾಗಿದೆ. ಇವರಿಗೆ ಹಲ್ಲೆ ನಡೆಸಿ ಗೂಂಡಾ ಪ್ರವೃತ್ತಿ ತೋರಿದ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಕೊಲೆ ಪ್ರಕರಣ ದಾಖಲಿಸಿ ಬಂಧಿಸಲಿ ಎಂದು ಒತ್ತಾಯಿಸಿದರು.
ಗುಜರಾತ್ ರಾಜ್ಯದಲ್ಲಿ ದಲಿತರ ಮೇಲೆ ಗೂಂಡಾ ಪ್ರವೃತ್ತಿ ನಡೆಸಿರುವ ಸಂಘಪರಿವಾರ, ಮಾನವ ಜೀವಿಸುವ ಹಕ್ಕಿನ ಮೇಲೆ ಘೋರ ಗಧಾಪ್ರಹಾರ ನಡೆಸುತ್ತಿದೆೆ. ಆ ರಾಜ್ಯದಲ್ಲಿ ಬಿಜೆಪಿಯೇತರರು ಜೀವಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಕೇಂದ್ರದ ನರೇಂದ್ರ ಮೋದಿ ಸರಕಾರ ಗುಜರಾತನ್ನು ಗೂಂಡಾ ರಾಜ್ಯ ಎಂದು ಘೋಷಿಸಲಿ ಎಂದು ಗಂಭೀರವಾಗಿ ಕೇಂದ್ರ ಸರಕಾರವನ್ನು ಒತ್ತಾಯಿಸಿದರು. ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ದಯಾಶಂಕರ್ ಸಿಂಗ್ ಪ್ರತಿಕೃತಿಯನ್ನು ಲಯನ್ಸ್ ವೃತ್ತದಲ್ಲಿ ದಹಿಸಿದರು. ಬಳಿಕ ರಸ್ತೆ ತಡೆ ನಡೆಸಿ ದಯಾಶಂಕರ್ ಸಿಂಗ್ ಹಾಗೂ ಕೋಮುವಾದಿಗಳಿಗೆ ಧಿಕ್ಕಾರದ ಘೋಷಣೆ ಕೂಗಿದರು. ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ, ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಬಿಎಸ್ಪಿ ಜಿಲ್ಲಾ ಮುಖಂಡರಾದ ಯು.ಬಿ.ಮಂಜಯ್ಯ, ಬೆಟ್ಟಿಗೆರೆ ಶಂಕರ್, ತಾಲೂಕು ಅಧ್ಯಕ್ಷ ಪಿ.ಕೆ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ರಾಮು, ಮುಖಂಡರಾದ ಹಮೀದ್ ಬಿಳಗುಳ, ಪ್ರತಾಪ್, ಸೈಯದ್, ಬಕ್ಕಿ ಮಂಜು, ಯು.ಬಿ.ನಾಗೇಶ್, ಕೆ.ಸಿ.ಚಂದ್ರಶೇಖರ್, ಬಿ.ವಿ.ಎಫ್. ಅಧ್ಯಕ್ಷ ಅಭಿಜಿತ್, ಬಕ್ಕಿ ರವಿ, ಹಾಂದಿ ಬಾಬಣ್ಣ, ದಲಿತ ಸಂಘದ ಜಿಲ್ಲಾ ಮುಖಂಡ ನಂಜುಂಡ ಮತ್ತಿತರರು ಉಪಸ್ಥಿತರಿದ್ದರು.







