ವಿವಿಧ ಸಮಸ್ಯೆಗಳ ಬಗ್ಗೆ ತಾಪಂ ಸಭೆಯಲ್ಲಿ ಚರ್ಚೆ
ಕಾರವಾರ, ಜು.22: ಕೃಷಿಕರಿಗೆ ನೀಡುವ ಬಾಡಿಗೆ ಯಂತ್ರೋಪಕರಣಗಳ ನಿರ್ವಹಣೆ, ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಸಮಸ್ಯೆ, ಬಿಡುಗಡೆಯಾಗದ ವಿದ್ಯಾರ್ಥಿ ವೇತನ ವಿಷಯಗಳ ಕುರಿತು ಆಯೋಜಿಸಲಾಗಿದ್ದ ತಾಪಂ ಸಾಮಾನ್ಯ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ಬಡ ಕೃಷಿಕರಿಗೆ ಯಂತ್ರೋಪಕರಣಗಳು ಲಭ್ಯವಾಗುವ ನಿಟ್ಟಿನಲ್ಲಿ ಗ್ರಾಮ ಯೋಜನೆಯ ಸಹಯೋಗದಲ್ಲಿ ಯಂತ್ರಧಾರೆ ಯೋಜನೆ ಜಾರಿಗೆ ತರಲಾಗಿದೆ. ಆದರೆ ತಾಲೂಕಿನಲ್ಲಿ ಬಾಡಿಗೆ ಕೃಷಿ ಯಂತ್ರೋಪಕರಣಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಸರಿಯಾದ ಸಮಯಕ್ಕೆ ಕೃಷಿ ಚಟುವಟಿಕೆಗಳಿಗೆ ಯಂತ್ರಗಳು ಸಿಗುತ್ತಿಲ್ಲ ಎಂದು ಸದಸ್ಯ ಪ್ರಶಾಂತ ಗೋವೆಕರ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಅಧಿಕಾರಿ ಗುಡಿಗಾರ, ಒಟ್ಟು 10 ಕೃಷಿ ಯಂತ್ರೋಪಕರಣಗಳನ್ನು ಯೋಜನೆಯಡಿ ಬಳಸಲಾಗುತ್ತಿದೆ. ಆದರೆ ರೈತರಿಂದ ಬೇಡಿಕೆ ಕಡಿಮೆ ಇರುವುದರಿಂದ ಎಲ್ಲ ಯಂತ್ರಗಳಿಗೂ ಒಬ್ಬೊಬ್ಬ ಚಾಲಕರನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬೇಡಿಕೆ ಕಡಿಮೆ ಇರುವುದರಿಂದ ಯಂತ್ರಧಾರೆ ಯೋಜನೆ ತಾಲೂಕಿನಲ್ಲಿ ನಷ್ಟದಲ್ಲಿದೆ. ಸದ್ಯ ಇಬ್ಬರು ಚಾಲಕರು ಲಭ್ಯವಿದ್ದಾರೆ. ರೈತರಿಗೆ ಅವಶ್ಯವಿರುವ ಯಂತ್ರವನ್ನು ಇದ್ದ ಚಾಲಕರೊಂದಿಗೆ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ರೈತರಿಗೆ ಯಂತ್ರೋಪಕರಣಗಳು ಇನ್ನೂ ಹೆಚ್ಚು ಲಭ್ಯವಾಗುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಕೃಷಿ ಅಧಿಕಾರಿ ಗುಡಿಗಾರ ಮಾಹಿತಿ ನೀಡಿದರು. ಶಾಲೆಗಳಿಗೆ ಅವಶ್ಯವಿರುವ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡಲಾಗಿದ್ದು, ಮಕ್ಕಳಿಗೆ ಉತ್ತಮ ಬಿಸಿಯೂಟವನ್ನು ನೀಡಲಾಗುತ್ತಿದೆ. ಆದರೆ ಮಳೆಗಾಲವಾಗಿರುವುದರಿಂದ ತರಕಾರಿ ಅಭಾವ ಇದ್ದು, ಇದಕ್ಕೆ ಪರ್ಯಾಯವಾಗಿ ಕಾಂಪೌಂಡ್ ಇರುವ ಶಾಲೆಗಳಲ್ಲಿ ತರಕಾರಿ ಗಿಡಗಳನ್ನು ಬೆಳೆಯಲು ಪ್ರೇರೇಪಿಸಲಾಗಿದೆ ಎಂದರು. 16ನೆ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದ ವಿದ್ಯಾರ್ಥಿ ವೇತನ ಅನುದಾನ ಕೊರತೆಯಿಂದ ರಾಜ್ಯದಲ್ಲಿ 991.84 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಒಟ್ಟು 14,86,391 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ 10,86,212 ವಿದ್ಯಾರ್ಥಿ ಗಳಿಗೆ ಮಾತ್ರ ಬಿಡುಗಡೆಯಾಗಿದೆ. ಅದನ್ನು ಈಗಾಗಲೇ ಪಟ್ಟಿ ಸಿದ್ಧಪಡಿಸಿದ್ದು ಅದರ ಪ್ರಕಾರ ಹಂಚಲಾಗುವುದು ಎಂದು ಮಾಹಿತಿ ನೀಡಿದರು.
ಗ್ರಾಮೀಣ ಭಾಗಕ್ಕೆ ಬಸ್ ಕೊರತೆ: ಸರಿಯಾದ ಸಮಯಕ್ಕೆ ಬಸ್ ಬಾರದ ಕಾರಣ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ತೊಂದರೆ ಪಡುತ್ತಿದ್ದಾರೆ ಎಂದು ಕೆಲ ಸದಸ್ಯರು ತಿಳಿಸಿದರು. ಮಳೆಗಾಲವಾಗಿರುವುದರಿಂದ ಕೆಲ ಭಾಗಗಳಲ್ಲಿ ಬಸ್ ಸಂಚಾರಕ್ಕೆ ತೊಂದರೆಯಾಗುತ್ತಿರುವುದೂ ಹೌದು. ಆಯಾ ಭಾಗದ ಬಸ್ ಚಾಲಕರೊಂದಿಗೆ ಚರ್ಚಿಸಿ ಸೂಕ್ತ ಸಮಯದಲ್ಲಿ ಬಸ್ ಸಂಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್ಸಾರ್ಟಿಸಿ ಅಧಿಕಾರಿ ತಿಳಿಸಿದರು. ಈ ಸಂದರ್ಭ ಸಣ್ಣ ನೀರಾವರಿ, ಪಶುಸಂಗೋಪನೆ, ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಚರ್ಚೆ ನಡೆಯಿತು. ತಾಪಂ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಉಪಾಧ್ಯಕ್ಷ ರವೀಂದ್ರ ಪವಾರ, ಜಿಪಂ ಸದಸ್ಯೆ ಚೈತ್ರಾ ಕೋಠಾರಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಾಂತ ಹೆಗಡೆ ಉಪಸ್ಥಿತರಿದ್ದರು.







