ಪುಪ್ಪುಸ ಉರಿತ - ನ್ಯೂಮೋನಿಯ ರೋಗ

ಭಾಗ 2
ಏಕಾಣು ಪುಪ್ಪುಸ ಉರಿತ ( Bacterial Pneumonia ):
ಏಕಾಣು ಪುಪ್ಪುಸ ಉರಿತ ಸಾಮಾನ್ಯವಾಗಿ ಎಳೆ ವಯಸ್ಸಿನಿಂದ ಮುಪ್ಪಿನವರೆಗೂ ಬರುವಂತಹ ರೋಗ. ಮದ್ಯಪಾನ ಮಾಡುವ ಮತ್ತು ಶ್ವಾಸಕೋಶ ರೋಗ ಇರುವ ವ್ಯಕ್ತಿಯ ಶ್ವಾಸಕೋಶ ಬಲಹೀನ ವಾಗಿರುತ್ತದೆ ಮತ್ತು ದುರ್ಬಲವಾಗಿರುತ್ತೆ. ಇದರಿಂದ ಏಕಾಣುಜೀವಿಗಳು ಪ್ರವೇಶಿಸಿ ಏಕಾಣು ಪುಪ್ಪುಸಉರಿತವಾಗುತ್ತದೆ.
ಏಕಾಣುಜೀವಿಗಳು ಕೆಲವು ಆರೋಗ್ಯಕರ ಗಂಟಲುಗಳ ಮೂಲಕ ಪ್ರವೇಶಿಸಿ ಬಲಹೀನವಾಗಿರುವ ಪುಪ್ಪುಸವನ್ನು ಸೇರಿ ಉರಿಯನ್ನು ಉಂಟು ಮಾಡುತ್ತವೆ. ಕೆಲವು ಸಾರಿ ಮನುಷ್ಯದೇಹದ ಪ್ರತಿರೋಧ ಕಡಿಮೆಯಾಗಿದ್ದರೆ, ಏಕಾಣುಗಳು ಹೆಚ್ಚಾಗಿ ಪುಪ್ಪುಸವನ್ನು ಪೂರ್ಣವಾಗಿ ಹಾನಿಯನ್ನು ಉಂಟುಮಾಡುತ್ತದೆ. ಇದರಿಂದ ಶ್ವಾಸಕೋಶದ ಗಾಳಿ ಚೀಲಗಳು ಟೊಳ್ಳಾಗುತ್ತದೆ. ಇದು ಇಡೀ ದೇಹದ ಮೇಲೆ ಪರಿಣಾಮ ಬೀರಿ ಸೋಂಕನ್ನು ಉಂಟುಮಾಡುತ್ತದೆ.
ಲಕ್ಷಣಗಳು:
ಏಕಾಣು ಪುಪ್ಪುಸ ಉರಿತ ಒಂದೇ ರೀತಿ ಇರುವುದಿಲ್ಲ. ಕೆಲವೊಮ್ಮೆ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಈ ರೋಗಿಗೆ
► ಮೈನಡುಕುವ ಚಳಿ, ಎದೆನೋವು, ಕೆಮ್ಮಿದಾಗ ಹಸಿರು ಬಣ್ಣದ ಕಫ ಇರುತ್ತದೆ.
► ಈ ರೋಗಿಯ ದೇಹದ ಮೈಶಾಖ ಏರುತ್ತದೆ.
► ಉಸಿರಾಟ ಸಮಸ್ಯೆ ಮತ್ತು ನರಗಳ ಬಡಿತ ಹೆಚ್ಚುತ್ತದೆ.
► ರೋಗಿಯ ಮಾನಸಿಕ ಸ್ಥಿತಿ ಗಲಿಬಿಲಿ ಮಾಡುತ್ತದೆ.
ವೈರಸ್ ಪುಪ್ಪುಸ ಉರಿತ :
ತೀಕ್ಷ್ಣವಾದ, ರೋಗದ ಒಂದು ಸುತ್ತು ಮುಗಿದ ಮೇಲೆ ರೋಗಿ ಚೇತರಿಸಿಕೊಳ್ಳಬಹುದಾದ ಶ್ವಾಸೋಚ್ಛಾಸ ಪ್ರವೇಶದ ಕಾಯಿಲೆ ಇದು. ಕೆಮ್ಮು, ಪುಪ್ಪುಸದೊಳಗೆ ದ್ರವ ಸೇರುವಿಕೆ ಇತ್ಯಾದಿಗಳು ಇದರ ಮುಖ್ಯ ಲಕ್ಷಣಗಳು. ವೈದ್ಯಕೀಯ ಭಾಷೆಯಲ್ಲಿ ಇದಕ್ಕೆ ಪ್ರೈಮರಿ ಎಟಿಸಿಕಲ್ ಪುಪ್ಪುಸ ಉರಿತ ಎನ್ನುತ್ತಾರೆ. ಅಂದರೆ ಪ್ರಾಥಮಿಕ ಮಾದರಿಗೆ ಸರಿಹೊಂದದ ಪುಪ್ಪುಸ ಉರಿತ ಎಂಬ ಅರ್ಥ
ಒಂದಕ್ಕಿಂತ ಹೆಚ್ಚು ಅಜ್ಞಾತ ರೋಗಕಾರಕಗಳು ಈ ರೋಗಕ್ಕೆ ಕಾರಣವೆಂದು ಕಂಡುಬಂದಿದೆ, ರೋಗ ಹಠಾತ್ತಾಗಿ ಕಾಣಿಸಿಕೊಳ್ಳುವುದಕ್ಕೆ ಪುಪ್ಪುಸದಲ್ಲಿ ಅಡಗಿರುವ ಗುಪ್ತ ವೈರಸ್‌ಗಳು ಹೊಣೆಯಾಗಿರಬಹುದು. ಒಂದು ವೈರಸ್ ಗುರುತಿಸಲ್ಪಟ್ಟಿದೆ. ಅದನ್ನು ಇನ್‌ಫ್ಲೊಯೆಂಜಾ ಗುಂಪಿನೊಡನೆ ಸೇರಿಸಲ್ಪಟ್ಟು ಇನ್‌ಫ್ಲೊಯೆಂಜಾ ವೈರಸ್ ಡಿ ಎಂದು ಕರೆಯಲಾಗಿದೆ.
ಲಕ್ಷಣಗಳು:
► ಹಠಾತ್ತನೆ ಕಾಣಿಸಿಕೊಳ್ಳುವ ಜ್ವರ.
► ಮಾಂಸಖಂಡ ನೋವು
► ತಲೆನೋವು. ಗಂಟಲು ಊತ
► ಕೆಮ್ಮು
► ರಕ್ತದಲ್ಲಿ ಬಿಳಿರಕ್ತಕಣಗಳು, ಕಡಿಮೆಯಾಗುವಿಕೆ.
ಇವು ಏಕಾಣು ಪುಪ್ಪುಸ ಉರಿತದ ಲಕ್ಷಣಗಳು.
ಉಪಚಾರ ಮತ್ತು ಚಿಕಿತ್ಸೆ :
ಇದಕ್ಕೆ ಆರೈಕೆ ಮತ್ತು ವಿಶ್ರಾಂತಿ ಅವಶ್ಯ. ಈ ದೃಷ್ಟಿಯಿಂದ ಈ ಕೆಳಗಿನ ಸಂಗತಿಗಳ ಬಗೆಗೆ ಹೆಚ್ಚು ಗಮನಹರಿಸಬೇಕು.
ರೋಗಿಗೆ ಸ್ವಲ್ಪವೂ ತಂಪು ಹವೆಯು ತಾಕದಂತೆ ನೋಡಿಕೊಳ್ಳಬೇಕು. ಅದಕ್ಕೆ ಬೆಚ್ಚನೆಯ ಹಾಸಿಗೆ, ಹೊದಿಗೆ, ಬಟ್ಟೆಬರೆ ಅವಶ್ಯ.
ರೋಗಿಗೆ ಮಲಶುದ್ಧಿಯಾಗದಿದ್ದರೆ, ಸೊಮ್ಯಶೇಚಕವನ್ನು ಕೊಡಬೇಕು.
► ಕೆಮ್ಮ ಅತಿಶಯವಾಗಿ ಎದೆ ನೋಯುತ್ತಿದ್ದರೆ, ಬಿಸಿ ನೀರನ್ನು ರಬ್ಬರ್ ಚೀಲದಲ್ಲಿ ಹಾಕಿ ಎದೆಯನ್ನೂ, ಬೆನ್ನನ್ನೂ ಕಾಯಿಸಬೇಕು. ಆದಷ್ಟು ಶುದ್ಧ ಹವೆಯಲ್ಲಿರಬೇಕು. ಪೂರ್ಣ ಗುಣಮುಖವಾಗುವವರೆಗೆ ಯಾವುದೇ ಬಗೆಯ ದೈಹಿಕ ಅಥವಾ ಮಾನಸಿಕ ಶ್ರಮವಿರದಂತೆ ಮಾಡಿ, ಸಂಪೂರ್ಣ ವಿಶ್ರಾಂತಿ ಒದಗಿಸಬೇಕು. ರೋಗದ ಲಕ್ಷಣ ಕಂಡುಬಂದೊಡನೆ ವೈದ್ಯರ ಸಲಹೆ ಮತ್ತು ಚಿಕಿತ್ಸೆಗೆ ಮುಂದಾಗಬೇಕು. ವೈದ್ಯರು
ಈ ರೋಗಕ್ಕೆ ಪೆನ್ಸಿಲಿನ್ ಇಂಜೆಕ್ಷನ್ ಮತ್ತಿತರ ಔಷಧ ಚಿಕಿತ್ಸೆಗಳನ್ನು ನೀಡಬಹುದು.







