ಅಕ್ರಮ ಮರಳುಗಾರಿಕೆ ಕಡಿವಾಣಕ್ಕೆ ದ.ಕ.ಜಿಲ್ಲಾಡಳಿತದ ಹೊಸ ಹೆಜ್ಜೆ!
ನಿಯಮ ಪಾಲಿಸದಿದ್ದರೆ ಶಾಶ್ವತವಾಗಿ ಕಪ್ಪುಪಟ್ಟಿಗೆ!
ಮಂಗಳೂರು, ಜು.22: ದ.ಕ. ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಗೆ ಒತ್ತು ನೀಡಿ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಕೆಲವೊಂದು ನಿರ್ದಿಷ್ಟ ಮಾರ್ಗಸೂಚಿಗಳನ್ನು ಶಿಫಾರಸು ಮಾಡಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ನೇತೃತ್ವದ ಸಮಿತಿಯು ಸಲ್ಲಿಸಿರುವ ವರದಿಗೆ ದ.ಕ. ಜಿಲ್ಲಾಡಳಿತ ಒಪ್ಪಿಗೆ ನೀಡಿದೆ. ಅದರಂತೆ ನಿಷೇಧಿತ ಅವಧಿಯ ಬಳಿಕ ಜಿಲ್ಲೆಯಲ್ಲಿ ಆರಂಭಗೊಳ್ಳಲಿರುವ ಮರಳುಗಾರಿಕೆಯ ವೇಳೆ ಪರವಾನಿಗೆದಾರರು ಸಮಿತಿಯು ಸೂಚಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.
ಈ ಮೂಲಕ ಅಕ್ರಮ ಮರಳುಗಾರಿಕೆ ಹಾಗೂ ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ಮರಳಿನ ಅಕ್ರಮ ಸಾಗಾಟಕ್ಕೂ ನಿಯಂತ್ರಣ ಹೇರಲು ಜಿಲ್ಲಾಡಳಿತ ಮುಂದಾಗಿದೆ. ನಿಯಮ ಪಾಲಿಸದ ಮರಳು ಪರವಾನಿಗೆದಾರರನ್ನು ಶಾಶ್ವತವಾಗಿ ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸುವ ಎಚ್ಚರಿಕೆಯನ್ನೂ ಜಿಲ್ಲಾಡಳಿತ ನೀಡಿದೆ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮಾರ್ಗದಶನದಲ್ಲಿ ಇತ್ತೀಚೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಪೊಲೀಸ್ ಉಪ ಆಯುಕ್ತರು, ಮರಳು ಪರವಾನಿಗೆದಾರರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿ ಈ ಕೆಳಗಿನ ಮಾರ್ಗಸೂಚಿಗಳನ್ನು ನಿಗದಿಪಡಿಸಲಾಗಿದೆ.
ಯಂತ್ರೋಪಕರಣ ಬಳಕೆ ಸಂಪೂರ್ಣ ನಿಷೇಧ: ಯಾವುದೇ ಕಾರಣಕ್ಕೂ ಮರಳು ತೆಗೆಯಲು ಯಂತ್ರೋಪಕರಣಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬುಲ್ಡೋಝರ್, ಹಿಟಾಚಿ, ಕ್ರೇನ್, ಜೆಸಿಬಿ, ಡ್ರೆಜ್ಜಿಂಗ್ ಯಂತ್ರಗಳು ಬಳಕೆಯಾದಲ್ಲಿ ಅಂತಹ ಮರಳುಗಾರರ ಪರವಾನಿಗೆ ರದ್ದುಪಡಿಸಿ ಅವರನ್ನು ಶಾಶ್ವತವಾಗಿ ಕಪ್ಪುಪಟ್ಟಿಗೆ ಸೇರಿಸಲಾಗುವುದು. ಮರಳು ತೆಗೆದ ಬಳಿಕವೂ ಟ್ರಕ್, ಲಾರಿ ಅಥವಾ ಟಿಪ್ಪರ್‌ಗಳಿಗೆ ಲೋಡಿಂಗ್ ಮಾಡುವಾಗಲೂ ಯಂತ್ರೋಪಕ ರಣ ಬಳಕೆಗೆ ಅವಕಾಶ ಇಲ್ಲ.
ಪರವಾನಿಗೆದಾರರೊಬ್ಬರಿಗೆ 2 ದೋಣಿ ಗಳು ಮಾತ್ರ: ಸಿಆರ್‌ಝೆಡ್‌ನ ನಿಯಮದ ಪ್ರಕಾರ ನಾಡದೋಣಿಗಳ ಮೂಲಕ ಮಾತ್ರ ಮರಳು ತೆಗೆಯಲು ಅವಕಾಶವಿದೆ. ಅದರಂತೆ ಪ್ರತಿ ಪರವಾನಿಗೆದಾರರು 12 ಮೀಟರ್ ಉದ್ದವುಳ್ಳ 2 ದೋಣಿಗಳನ್ನು ಮಾತ್ರವೇ ಬಳಸಬಹುದು. ದೋಣಿಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರಿಂದ ನೋಂದಣಿ ಮಾಡಿಸತಕ್ಕದ್ದು. ನೋಂದಣಿ ಮಾಡಿದ ದೋಣಿಗಳಿಗೆ ನೋಂದಣಿ ಸಂಖ್ಯೆ ನಮೂದಿಸುವುದು ಹಾಗೂ ದೋಣಿಗಳಿಗೆ ಕೆಂಪು ಮತ್ತು ಹಳದಿ ಬಣ್ಣದಿಂದ ಪೈಂಟ್ ಮಾಡುವುದು. ಪರವಾನಿಗೆದಾರರು ಶೆಡ್‌ಗಳನ್ನು ನಿರ್ಮಿಸುವಾಗ ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆದು ತಾತ್ಕಾಲಿಕ ಶೆಡ್ ನಿರ್ಮಿಸಿ ಮರಳುಗಾರಿಕೆ ಸ್ಥಗಿತಗೊಂಡಾಗ ಅದನ್ನು ತೆರವುಗೊಳಿಸಬೇಕು. ಮರಳುಗಾರಿಕೆ ಪ್ರದೇಶದಲ್ಲಿ ಪರವಾನಿಗೆದಾರರ ವಿವರವುಳ್ಳ ನಾಮ ಫಲಕ ಹಾಕಿರಬೇಕು.
ರಾತ್ರಿ ವೇಳೆ ಮರಳುಗಾರಿಕೆ ಸಂಪೂರ್ಣ ನಿಷೇಧ: ಬೆಳಗ್ಗೆ 6ರಿಂದ
ಂಜೆ 6 ಗಂಟೆಯವರೆಗೆ ಮಾತ್ರ ಮರಳುಗಾರಿಕೆಗೆ ಅವಕಾಶ. ಪರವಾನಿಗೆಯ ನಿಗದಿತ ಪ್ರಮಾಣಕ್ಕೆ ಅನುಗುಣವಾಗಿ ಮರಳು ಸಾಗಾಟ ಮಾಡತಕ್ಕದ್ದು. 6 ಚಕ್ರದ ವಾಹನಗಳಲ್ಲಿ ಮಾತ್ರ ಸಾಗಾಟಕ್ಕೆ ಅವಕಾಶ ವಿದ್ದು, 10 ಮತ್ತು 12 ಚಕ್ರದ ವಾಹನಗಳಲ್ಲಿ ಮರಳು ಸಾಗಾಟಕ್ಕೆ ಸಂಪೂರ್ಣ ನಿಷೇಧ. ಅಕ್ರಮ ಮರಳು ಸಾಗಾಟ ತಡೆಗಟ್ಟಲು ಸಿಸಿ ಕ್ಯಾಮರಾ ಅಳವಡಿಸಿ ಪೊಲೀಸ್ ಆಯುಕ್ತರು ಹಾಗೂ ಪೊಲೀಸ್‌ಅಧೀಕ್ಷಕರ
ಕಚೇರಿಯಲ್ಲಿ ಪರಿಶೀಲನೆ ನಡೆಸಲಾಗುವುದು. ಪರವಾನಿಗೆದಾರರಿಗೆ ಐಎಲ್‌ಎಂಎಸ್ ತಂತ್ರಾಂಶದ ಮೂಲಕ ಪರವಾನಿಗೆ ನೀಡಲಾಗುವುದು. ಪರವಾನಿಗೆ ದುರುಪಯೋಗವಾದಲ್ಲಿ ಕಾನೂನು ಕ್ರಮ ಜರಗಿಸಲಾಗುವುದು. ತನಿಖಾ ಠಾಣೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಪರವಾನಿಗೆಯನ್ನು ಪರಿಶೀಲಿಸಿ ಮೊಹರನ್ನು ಹಾಕಲಾಗುವುದು. ವಾಹನಗಳ ನೋಂದಣಿ ಮಾಡಿ ರಿಜಿಸ್ಟರ್ ನಿರ್ವಹಣೆ ಮಾಡಲಾಗುವುದು. ಸಿಆರ್‌ಝೆಡ್ ವ್ಯಾಪ್ತಿಯ 19 ಮರಳು ದಿಣ್ಣೆಗಳಲ್ಲಿ ಪ್ರತಿ ಮರಳು ದಿಣ್ಣೆಗೆ ಒಬ್ಬ ನೋಡಲ್ ಅಧಿಕಾರಿಯ ನೇಮಕ. ಮರಳು ಸಾಗಾಟ ವಾಹನಗಳಿಗೆ ಜಿಪಿಎಸ್ ಯಂತ್ರವನ್ನು ಅಳವಡಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಮರಳು ಸಾಗಾಟ ವಾಹನಗಳಿಗೆ ‘ಮರಳು ಸಾಗಾಟ ವಾಹನ’ ಎಂದು ಕಾಣುವ ರೀತಿಯಲ್ಲಿ ಬರೆಯತಕ್ಕದ್ದು.







