ಉಡುಪಿಯಲ್ಲಿ ರೈನ್ ಸೆಂಟರ್ ಅಗತ್ಯ: ಡಾ.ಶೇಖರ್

ಉಡುಪಿ, ಜು.22: ಮಳೆಗಾಲದಲ್ಲಿ ಅತ್ಯಂತ ಹೆಚ್ಚು ಮಳೆಯಾದರೂ ಬೇಸಿಗೆ ಯಲ್ಲಿ ನೀರಿಗೆ ಬರ ಎದುರಾಗುವಂತಹ ಉಡುಪಿಯಲ್ಲಿ ಅಂತರ್ಜಲ ಹೆಚ್ಚಿಸಲು ಚೆನ್ನೈಯಲ್ಲಿರುವಂತಹ ಮಳೆ ಕೇಂದ್ರ (ರೈನ್ ಸೆಂಟರ್)ವನ್ನು ಸ್ಥಾಪಿಸಬೇಕಾದ ಅಗತ್ಯವಿದೆ ಎಂದು ಚೆನ್ನೈ ರೈನ್ ಸೆಂಟರ್‌ನ ನಿರ್ದೇಶಕ ಹಾಗೂ ಸಂಶೋಧಕ ಡಾ.ಶೇಖರ್ ರಾಘವನ್ ತಿಳಿಸಿದ್ದಾರೆ.
ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ವತಿಯಿಂದ ಶುಕ್ರವಾರ ಅಂಬಲಪಾಡಿಯಲ್ಲಿ ಹಮ್ಮಿಕೊಳ್ಳಲಾದ ಮಳೆಕೊಯ್ಲು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ರೈನ್ ಸೆಂಟರ್ ಸ್ಥಾಪಿಸುವ ಕುರಿತು ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ. ಉಡುಪಿಯಲ್ಲಿ ಪ್ರತಿವರ್ಷ 400 ಸೆ.ಮೀ. ಮಳೆ ಯಾಗುತ್ತದೆ. ಇದು ಚೆನ್ನೈಯಲ್ಲಿ ಬೀಳುವ ಮಳೆಗಿಂತ ಮೂರು ಪಟ್ಟು ಹೆಚ್ಚು. ವರ್ಷದಲ್ಲಿ 60-90 ದಿನಗಳ ಕಾಲ ಮಳೆಯಾದರೂ, ನಗರ ಪ್ರದೇಶ ದಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಅಭಾವ ಎದುರಾಗುತ್ತದೆ. ಇದನ್ನು ಮಳೆಕೊಯ್ಲಿನಿಂದ ನೀಗಿಸಬಹುದಾಗಿದೆ ಎಂದರು.
ಬರ ಮತ್ತು ನೆರೆಯ ನಡುವಿನ ಅಂತರವನ್ನು ಸರಿದೂಗಿಸುವ ಕಾರ್ಯ ಮಾಡಬೇಕಾಗಿದೆ. ಮಳೆಕೊಯ್ಲು ಕಾರ್ಯಕ್ರಮವನ್ನು ಗ್ರಾಪಂ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ತಳಮಟ್ಟದಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಚಿಂತನೆ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್ ಉಪಸ್ಥಿತರಿದ್ದರು. ಜಗದೀಶ್ ಆಚಾರ್ಯ ಅತಿಥಿ ಪರಿಚಯ ಮಾಡಿದರು. ವಸಂತ ರಾವ್ ಸ್ವಾಗತಿಸಿದರು.





