ಅಸ್ಸಾಂನ ರಣಜಿ ಟ್ರೋಫಿ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಸುನೀಲ್ ಜೋಶಿ

ಬೆಂಗಳೂರು, ಜು.22: ಭಾರತದ ಮಾಜಿ ಸ್ಪಿನ್ನರ್ ಸುನೀಲ್ ಜೋಶಿ ಮುಂದಿನ ಎರಡು ವರ್ಷಗಳ ಅವಧಿಗೆ ಅಸ್ಸಾಂನ ರಣಜಿ ಟ್ರೋಫಿ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಕರ್ನಾಟಕದ ಮಾಜಿ ಕ್ರಿಕೆಟಿಗ ಜೋಶಿ ಈ ಹಿಂದೆ ಜಮ್ಮು-ಕಾಶ್ಮೀರ ಹಾಗೂ ಹೈದರಾಬಾದ್ ತಂಡಗಳಿಗೆ ಕೋಚ್ ಆಗಿದ್ದರು. ಈ ವರ್ಷ ನಡೆದ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ ವೇಳೆ ಒಮನ್ ರಾಷ್ಟ್ರೀಯ ತಂಡಕ್ಕೆ ಸ್ಪಿನ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಜೋಶಿ ಇದೀಗ ಸನತ್ ಕುಮಾರ್ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಮುಂಬರುವ ರಣಜಿ ಟ್ರೋಫಿ ಪಂದ್ಯಗಳು ತಟಸ್ಥ ಸ್ಥಳಗಳಲ್ಲಿ ನಡೆಸಲು ಬಿಸಿಸಿಐ ಈಗಾಗಲೇ ನಿರ್ಧಾರ ಕೈಗೊಂಡಿದೆ. 69 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ 13 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಜೋಶಿ ಪ್ರಕಾರ, ಬಿಸಿಸಿಐನ ಈ ಹೊಸ ಮಾದರಿಯು ಆಟಗಾರರಿಗೆ ತಮ್ಮ ಕೌಶಲವನ್ನು ಉತ್ತಮಪಡಿಸಲು ಇರುವ ಅವಕಾಶವಾಗಿದೆ.
2015-16ರ ಋತುವಿನಲ್ಲಿ ಅಸ್ಸಾಂ ತಂಡ ನಾಕೌಟ್ ಹಂತಕ್ಕೇರಿದ್ದನ್ನು ಗಮನಿಸಿರುವ ಜೋಶಿ, ಅಸ್ಸಾಂ ಕೋಚ್ ಆಗಿ ನೇಮಕಗೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಲ್ಲದೆ, ಮುಂದಿನ ಋತುವಿನಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡಲು ತಂಡಕ್ಕೆ ನೆರವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘‘ಕಳೆದ ಋತುವಿನ ರಣಜಿ ಟ್ರೋಫಿಯಲ್ಲಿ ಸೆಮಿ ಫೈನಲ್‌ಗೆ ತಲುಪಿರುವ ಅಸ್ಸಾಂ ತಂಡ ತಾನೊಂದು ಕಠಿಣ ತಂಡವೆಂದು ಸಾಬೀತುಪಡಿಸಿತ್ತು. ಅಸ್ಸಾಂ ತಂಡದಲ್ಲಿ ಉತ್ತಮ ಬೌಲರ್‌ಗಳಿದ್ದಾರೆ. ಬೌಲರ್‌ಗಳ ಶ್ರಮ ಸಾರ್ಥಕವಾಗಲು ಬ್ಯಾಟ್ಸ್‌ಮನ್‌ಗಳು ಕಾಣಿಕೆ ನೀಡಬೇಕು’’ ಎಂದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 489 ವಿಕೆಟ್‌ಗಳನ್ನು ಪಡೆದು ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಜೋಶಿ ಅಭಿಪ್ರಾಯಪಟ್ಟರು.







