ಚೊಚ್ಚಲ ಪಂದ್ಯದಲ್ಲಿ ಮಿಂಚಿದ ಮುಸ್ತಫಿಝುರ್ರಹ್ಮಾನ್
ನಾಟ್‌ವೆಸ್ಟ್ ಟ್ವೆಂಟಿ-20

ಲಂಡನ್, ಜು.22: ಬಾಂಗ್ಲಾದೇಶದ ಯುವ ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್ ನಾಟ್‌ವೆಸ್ಟ್ ಟ್ವೆಂಟಿ-20 ಬ್ಲಾಸ್ಟ್ ಟೂರ್ನಿಯಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಗೊಂಚಲು ಪಡೆದು ಮಿಂಚಿದ್ದಾರೆ.
ಕ್ರಿಸ್ ಜೋರ್ಡನ್ ಮಿಂಚಿನ ಬ್ಯಾಟಿಂಗ್ ಹಾಗೂ ಮುಸ್ತಫಿಝುರ್ರಹ್ಮಾನ್ ಉತ್ತಮ ಬೌಲಿಂಗ್(4-23) ನೆರವಿನಿಂದ ಸಸ್ಸೆಕ್ಸ್ ತಂಡ ಎಸ್ಸೆಕ್ಸ್ ವಿರುದ್ಧ 24 ರನ್‌ಗಳ ಅಂತರದಿಂದ ಸುಲಭ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಸಸ್ಸೆಕ್ಸ್ ತಂಡ ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನಕ್ಕೇರಿದೆ.
ಕ್ರಿಸ್ ಜೋರ್ಡನ್(ಔಟಾಗದೆ 45), ನಾಯಕ ಲೂಕ್ ರೈಟ್(32) ಹಾಗೂ ಫಿಲಿಪ್ ಸಾಲ್ಟ್(33) ಕಾಣಿಕೆಯ ನೆರವಿನಿಂದ ಸಸ್ಸೆಕ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 200 ರನ್ ಗಳಿಸಿತು.
ಗೆಲ್ಲಲು ಕಠಿಣ ಸವಾಲು ಪಡೆದ ಎಸ್ಸೆಕ್ಸ್ ತಂಡ ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಲಷ್ಟೇ ಶಕ್ತವಾಯಿತು. ಆಶರ್ ಝೈದಿ ಹಾಗೂ ನಾಯಕ ರವಿ ಬೋಪಾರ(32) ನಡೆಸಿದ 42 ರನ್ ಜೊತೆಯಾಟ ಹೊರತುಪಡಿಸಿ ಯಾವ ಹಂತದಲ್ಲೂ ಉತ್ತಮ ಹೋರಾಟ ನೀಡಲಿಲ್ಲ.
ಮುಸ್ತಫಿಝುರ್ರಹ್ಮಾನ್ 16ನೆ ಓವರ್‌ನಲ್ಲಿ ಬೋಪಾರ ವಿಕೆಟ್ ಪಡೆದರು. ಮುಂದಿನ ಓವರ್‌ನಲ್ಲಿ ಜೇಮ್ಸ್ ಫೋಸ್ಟರ್, ಕಾಲಂ ಟೇಲರ್ ಹಾಗೂ ರಿಯಾನ ಡೆಶ್ಚಾಟ್ ವಿಕೆಟ್ ಪಡೆದು ಎದುರಾಳಿ ತಂಡ ಚೇತರಿಸಿಕೊಳ್ಳದಂತೆ ನೋಡಿಕೊಂಡರು.







