ಏಳನೆ ಬಾರಿ ಒಲಿಂಪಿಕ್ಸ್‌ನಲ್ಲಿ ಆಡಲು ಲಿಯಾಂಡರ್ ಪೇಸ್ ಸಜ್ಜು

ಹೊಸದಿಲ್ಲಿ, ಜು.19: ಸಾರ್ವಕಾಲಿಕ ಶ್ರೇಷ್ಠ ಡಬಲ್ಸ್ ಆಟಗಾರರಲ್ಲಿ ಓರ್ವರೆನಿಸಿಕೊಂಡಿರುವ ಭಾರತದ ಹಿರಿಯ ಟೆನಿಸ್ ಪಟು ಲಿಯಾಂಡರ್ ಪೇಸ್ ಏಳನೆ ಬಾರಿ ಒಲಿಂಪಿಕ್ಸ್‌ನಲ್ಲಿ ಆಡಲು ಸಜ್ಜಾಗಿದ್ದಾರೆ. ಈ ಮೂಲಕ ಹೊಸ ಇತಿಹಾಸ ನಿರ್ಮಿಸುವ ವಿಶ್ವಾಸದಲ್ಲಿದ್ದಾರೆ.
1996ರ ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿ ಭಾರತದ 49 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದ ಲಿಯಾಂಡರ್ ಪೇಸ್ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕವನ್ನು ಜಯಿಸಿ ಭಾರತಕ್ಕೆ ಪದಕದ ಬರ ನೀಗಿಸಿದ್ದರು. 1952ರ ಬಳಿಕ ವೈಯಕ್ತಿಕ ವಿಭಾಗದಲ್ಲಿ ಪದಕ ಜಯಿಸಿದ್ದ ಮೊದಲ ಭಾರತೀಯನೆಂಬ ಕೀರ್ತಿಗೂ ಭಾಜನರಾಗಿದ್ದರು.
1996ರ ಒಲಿಂಪಿಕ್ಸ್‌ನಲ್ಲಿ ಸಿಂಗಲ್ಸ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಪೇಸ್ ಆಗಿನ ವಿಶ್ವದ ನಂ.3ನೆ ಆಟಗಾರ ಆ್ಯಂಡ್ರೆ ಅಗಾಸ್ಸಿ ವಿರುದ್ಧ 7-6, 6-3 ಸೆಟ್‌ಗಳ ಅಂತರದಿಂದ ಸೋತಿದ್ದರು. ಸೆಮಿಫೈನಲ್‌ನಲ್ಲಿ ಸೋತ ಆಟಗಾರರಿಗಾಗಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಪೇಸ್ ಬ್ರೆಝಿಲ್‌ನ ಫೆರ್ನಾಂಡೊ ಮೆಲಿಗೆನಿ ಅವರನ್ನು 6-2, 6-4 ಸೆಟ್‌ಗಳ ಅಂತರದಿಂದ ಮಣಿಸಿ ಕಂಚಿನ ಪದಕವನ್ನು ಪಡೆದು ಐತಿಹಾಸಿಕ ಸಾಧನೆ ಮಾಡಿದರು. 44 ವರ್ಷಗಳ ಬಳಿಕ ಭಾರತಕ್ಕೆ ವೈಯಕ್ತಿಕ ವಿಭಾಗದಲ್ಲಿ ಪದಕ ಗೆದ್ದುಕೊಟ್ಟರು.
1992ರಲ್ಲಿ ಬಾರ್ಸಿಲೋನದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಒಲಿಂಪಿಕ್ಸ್ ಆಡಿದ ಪೇಸ್ ಪುರುಷರ ಡಬಲ್ಸ್‌ನಲ್ಲಿ ರಮೇಶ್ ಕೃಷ್ಣನ್ ಜೊತೆಗೂಡಿ ಕ್ವಾರ್ಟರ್ ಫೈನಲ್ ತನಕ ತಲುಪಿದ್ದರು.
42ರ ಹರೆಯದ ಪೇಸ್ ಈಗಲೂ ವೃತ್ತಿಪರ ಟೆನಿಸ್‌ನಲ್ಲಿ ಸಕ್ರಿಯರಾಗಿದ್ದು, ಈಗಾಗಲೇ 18 ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಡಬಲ್ಸ್ ವಿಭಾಗದಲ್ಲಿ 700ಕ್ಕೂ ಅಧಿಕ ಗೆಲುವು ಪಡೆದಿರುವ ಪೇಸ್ ಸತತ ಏಳನೆ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ.
ಪೇಸ್ 2016ರ ಫ್ರೆಂಚ್ ಓಪನ್‌ನಲ್ಲಿ ಡಬಲ್ಸ್ ಪ್ರಶಸ್ತಿಯನ್ನು ಜಯಿಸಿರುವ ಪೇಸ್ ಎಲ್ಲ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಜಯಿಸಿದ್ದರು. ಮಾತ್ರವಲ್ಲ ಗ್ರಾನ್‌ಸ್ಲಾಮ್ ಗೆದ್ದುಕೊಂಡ ಹಿರಿಯ ಆಟಗಾರ ಎನಿಸಿಕೊಂಡಿದ್ದರು.
ಈ ಬಾರಿ ರಿಯೋ ಗೇಮ್ಸ್‌ನಲ್ಲಿ ಪೇಸ್ ಭಾಗವಹಿಸುವ ಬಗ್ಗೆ ಪ್ರಶ್ನೆ ಎದ್ದಿತ್ತು. ಅಖಿಲ ಭಾರತ ಟೆನಿಸ್ ಅಸೋಸಿಯೇಶನ್(ಎಐಟಿಎ) ಪುರುಷರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣರ ಜೋಡಿಯಾಗಿ ಪೇಸ್‌ರನ್ನು ಆಯ್ಕೆ ಮಾಡುವ ಮೂಲಕ ಪ್ರಶ್ನೆಗೆ ಉತ್ತರ ನೀಡಿತ್ತು. 2
012ರ ಲಂಡನ್ ಒಲಿಂಪಿಕ್ಸ್‌ನಂತೆಯೇ ಈ ಬಾರಿಯೂ ಬೋಪಣ್ಣ ಹಿರಿಯ ಆಟಗಾರ ಪೇಸ್‌ರೊಂದಿಗೆ ಡಬಲ್ಸ್ ಪಂದ್ಯವಾಡಲು ಹಿಂದೇಟು ಹಾಕಿದ್ದರು. ಮಧ್ಯಪ್ರವೇಶಿಸಿದ ಎಐಟಿಎ ಬೋಪಣ್ಣರ ಡಬಲ್ಸ್ ಜೋಡಿಯಾಗಿ ಪೇಸ್‌ರನ್ನೇ ಆಯ್ಕೆ ಮಾಡಿತ್ತು.
ತನ್ನೊಂದಿಗೆ ಡಬಲ್ಸ್ ಪಂದ್ಯ ಆಡಲು ಇಷ್ಟಪಡದ ಬೋಪಣ್ಣರ ಜೊತೆಗೂಡಿ ಪೇಸ್ ಈ ಬಾರಿ ಒಲಿಂಪಿಕ್ ಪದಕ ಗೆಲ್ಲುತ್ತಾರೆಯೇ ಎಂಬ ಪ್ರಶ್ನೆ ಟೆನಿಸ್ ಅಭಿಮಾನಿಗಳನ್ನು ಕಾಡಲಾರಂಭಿಸಿದೆ. ದೇಶದ ಹಿತದೃಷ್ಟಿಯಿಂದ ಭಾರತ ತಂಡ ಆಂತರಿಕ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಿಕೊಳ್ಳುವುದೇ ಎಂದು ಕಾದು ನೋಡಬೇಕಾಗಿದೆ.
ಟೆನಿಸ್ ಎಂದರೆ ಪಂಚಪ್ರಾಣ. ಹಾಗಾಗಿ ಸದ್ಯಕ್ಕೆ ನಿವೃತ್ತಿಯ ಯೋಚನೆಯಿಲ್ಲ. ಫಿಟ್‌ನೆಸ್ ಇರುವ ತನಕ ಸಾಧ್ಯವಾದರೆ 50 ವರ್ಷದ ತನಕವೂ ಟೆನಿಸ್ ಆಡುವೆ. ನನ್ನ ಪ್ರಕಾರ ವಯಸ್ಸು ಕೇವಲ ಸಂಖ್ಯೆಯಷ್ಟೇ. ನಾನು ಇಂದು ನಿವೃತ್ತಿಯಾದರೆ ಜನ ಏನೂ ಹೇಳಲಾರರು. ಏಕೆಂದರೆ ನಾನು ಸಾಧನೆ ಮಾಡುವುದು ಏನೂ ಉಳಿದಿಲ್ಲ ಎಂದು ಪೇಸ್ ಹೇಳಿದ್ದಾರೆ.
ಲಿಯಾಂಡರ್ ಪೇಸ್ ಸಾಧನೆಯ ಪಟ್ಟಿ
+ 18 ಗ್ರಾನ್‌ಸ್ಲಾಮ್ ಪ್ರಶಸ್ತಿ
+ ಮಿಶ್ರ ಡಬಲ್ಸ್‌ನಲ್ಲಿ ಎಲ್ಲ ನಾಲ್ಕು ಗ್ರಾನ್‌ಸ್ಲಾಮ್ ಪ್ರಶಸ್ತಿ
+ 1996ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ
+ ವೃತ್ತಿಜೀವನದಲ್ಲಿ 55 ಎಟಿಪಿ ಪ್ರಶಸ್ತಿ
+ ಭಾರತದ ಉನ್ನತ ಕ್ರೀಡಾ ಗೌರವ ‘ರಾಜೀವ್ ಗಾಂಧಿ ಖೇಲ್ ರತ್ನ’







