ಎರಡನೆ ಟೆಸ್ಟ್: ಇಂಗ್ಲೆಂಡ್ 314/4
ಕುಕ್, ರೂಟ್ ಆಕರ್ಷಕ ಶತಕ

ಓಲ್ಡ್ ಟ್ರಾಫೋರ್ಡ್, ಜು.22: ನಾಯಕ ಅಲೆಸ್ಟೈರ್ ಕುಕ್ ಹಾಗೂ ಜೋ ರೂಟ್ ಶತಕದ ನೆರವಿನಿಂದ ಪಾಕಿಸ್ತಾನದ ವಿರುದ್ಧ ಶುಕ್ರವಾರ ಇಲ್ಲಿ ಆರಂಭವಾದ ಎರಡನೆ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 89 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 314 ರನ್ ಗಳಿಸಿದೆ. ಜೋ ರೂಟ್(ಔಟಾಗದೆ 141, 246 ಎಸೆತ, 18 ಬೌಂಡರಿ) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಟಾಸ್ ಜಯಿಸಿದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. 7ನೆ ಓವರ್‌ಗೆ ಹೇಲ್ಸ್(10) ವಿಕೆಟ್ ಕಳೆದುಕೊಂಡ ಆಂಗ್ಲರು ಆರಂಭಿಕ ಆಘಾತ ಅನುಭವಿಸಿದ್ದರು. ಆಗ 2ನೆ ವಿಕೆಟ್‌ಗೆ 185 ರನ್ ಸೇರಿಸಿದ ನಾಯಕ ಕುಕ್(105 ರನ್, 172 ಎಸೆತ, 15 ಬೌಂಡರಿ) ಹಾಗೂ ರೂಟ್ ತಂಡವನ್ನು ಆಧರಿಸಿದರು.
ಕುಕ್ ತಂಡದ ನಾಯಕನಾಗಿ 157 ಎಸೆತಗಳಲ್ಲಿ 11 ಬೌಂಡರಿ ನೆರವಿನಿಂದ 11ನೆ ಶತಕ ಬಾರಿಸಿದರು. ಈ ಮೂಲಕ ಇಂಗ್ಲೆಂಡ್‌ನ ಮಾಜಿ ಆಟಗಾರ ಗ್ರಹಾಂ ಗೂಚ್ ದಾಖಲೆಯನ್ನು ಸರಿಗಟ್ಟಿದರು.
ಕುಕ್ ಔಟಾದ ಬಳಿಕ ಬ್ಯಾಲನ್ಸ್‌ರೊಂದಿಗೆ 4ನೆ ವಿಕೆಟ್‌ಗೆ 73 ರನ್ ಸೇರಿಸಿದ ರೂಟ್ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.
ಪಾಕ್‌ನ ಪರ ವೇಗದ ಬೌಲರ್ ಮುಹಮ್ಮದ್ ಆಮಿರ್(2-63) ಹಾಗೂ ರಾಹತ್ ಅಲಿ(2-69) ತಲಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಪ್ರಥಮ ಇನಿಂಗ್ಸ್: 89 ಓವರ್‌ಗಳಲ್ಲಿ 314/4
(ರೂಟ್ ಔಟಾಗದೆ 141, ಕುಕ್ 105, ಆಮಿರ್ 2-63, ರಾಹತ್ ಅಲಿ 2-69)







