ದಲಿತರ ಮೇಲಿನ ದೌರ್ಜನ್ಯದ ಕುರಿತು ವೌನ: ಪ್ರಧಾನಿಯನ್ನು ಮತ್ತೆ ತರಾಟೆಗೆತ್ತಿಕೊಂಡ ಲಾಲು
ಪಟ್ನಾ,ಜು.22: ದಲಿತರ ವಿರುದ್ಧ ದೌರ್ಜನ್ಯಗಳ ಕುರಿತಂತೆ ನಿರಂತರವಾಗಿ ವೌನ ವಹಿಸಿರುವುದಕ್ಕಾಗಿ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಸತತ ಎರಡನೇ ದಿನವಾದ ಶುಕ್ರವಾರವೂ ತರಾಟೆಗೆತ್ತಿ ಕೊಂಡರು. ಮೋದಿಯವರ ಪ್ರಚೋದನೆಯಿಂದಲೇ ಈ ಘಟನೆಗಳು ನಡೆಯುತ್ತಿವೆಯೇ ಎಂದು ಅಚ್ಚರಿಯನ್ನೂ ಅವರು ಪ್ರಕಟಿಸಿದರು.
ಇತರರ ಸಣ್ಣಪುಟ್ಟ ವಿಷಯಗಳಿಗೆ ಪ್ರಧಾನಿಯವರು ಬೊಬ್ಬಿಡುತ್ತಾರೆ. ಆದರೆ ಬಡವರು ಮತ್ತು ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತಂತೆ ಸುದೀರ್ಘ ಸಮಯದಿಂದ ವೌನ ವಹಿಸಿದ್ದಾರೆ. ಇವೆಲ್ಲ ಘಟನೆಗಳು ಅವರ ಪ್ರಚೋದನೆಯಿಂದಲೇ ನಡೆಯುತ್ತಿವೆಯೇ ಎಂದು ಲಾಲು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಅವರು ತನ್ನ ಪುತ್ರ ಹಾಗೂ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಟ್ವೀಟ್‌ಗೆ ಉತ್ತರಿಸುತ್ತಿದ್ದರು.
‘‘ಪ್ರಿಯ ನರೇಂದ್ರ ಮೋದಿಜಿ, ನಿಮ್ಮ ಇಂದಿನ ಗೋರಖ್‌ಪುರ ರ್ಯಾಲಿಯಲ್ಲಿ ನಿಮ್ಮ ಆಡಳಿತದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ದಲಿತ ದೌರ್ಜನ್ಯಗಳ ಕುರಿತು ಮಾತನಾಡುತ್ತೀರಿ ಎಂದು ಆಶಿಸಿದ್ದೇನೆ. ದಯವಿಟ್ಟು ನಿಮ್ಮ ಕಾರ್ಯಕರ್ತರಿಗೆ ಕಠಿಣ ಸಂದೇಶವನ್ನು ನೀಡಿ’’ ಎಂದು ಕಿರಿಯ ಯಾದವ್ ಟ್ವೀಟಿಸಿದ್ದರು.
ಗುಜರಾತಿನ ಉನಾದಲ್ಲಿ ಕಳೆದ ವಾರ ಕೆಲವು ದಲಿತ ಯುವಕರ ಮೇಲೆ ಹಲ್ಲೆ ಕುರಿತಂತೆ ವೌನ ವಹಿಸಿರುವುದಕ್ಕಾಗಿ ಮೋದಿಯವರನ್ನು ಗುರುವಾರ ತರಾಟೆಗೆತ್ತಿಕೊಂಡಿದ್ದ ಲಾಲು, ಸಪ್ತಸಾಗರಗಳಾಚೆಗಿನ ಘಟನೆಗಳಿಗೂ ಪ್ರತಿಕ್ರಿಯಿಸುವ ನಮ್ಮ ಪ್ರಧಾನಿ ಗುಜರಾತ್‌ನಲ್ಲಿಯ ದುರದೃಷ್ಟಕರ ಘಟನೆಗಳ ಬಗ್ಗೆ ಸೊಲ್ಲನ್ನೇ ಎತ್ತುತ್ತಿಲ್ಲ ಎಂದು ಟ್ವೀಟಿಸಿದ್ದರು.





