ಮಾಯಾವತಿ ಬೆಂಬಲಿಗರಿಂದ ಬೆದರಿಕೆ: ದಯಾಶಂಕರ್ ಪತ್ನಿಯ ಆರೋಪ
ಲಕ್ನೊ, ಜು.22: ಮಾಯಾವತಿಯವರ ಬಹುಜನ ಸಮಾಜ ಪಕ್ಷವು(ಬಿಎಸ್ಪಿ) ತನಗೆ ಹಾಗೂ ತನ್ನ 12ರ ಹರೆಯದ ಮಗಳಿಗೆ ಬೈಗುಳ ಹಾಗೂ ಬೆದರಿಕೆ ಹಾಕು ತ್ತಿದೆಯೆಂದು ದಯಾಶಂಕರ ಸಿಂಗ್‌ರ ಪತ್ನಿ ಸ್ವಾತಿ ಸಿಂಗ್ ಆರೋಪಿಸಿದ್ದಾರೆ.
ಮಾಯಾವತಿಯ ವಿರುದ್ಧ ಮಾನ ಹಾನಿಕರ ಹೇಳಿಕೆ ನೀಡಿದುದಕ್ಕಾಗಿ ಬಿಜೆಪಿಯಿಂದ ಉಚ್ಚಾಟಿಸಲ್ಪಟ್ಟಿರುವ ಉತ್ತರ ಪ್ರದೇಶದ ರಾಜಕಾರಣಿ ದಯಾಶಂಕರ್‌ಗಾಗಿ ಪೊಲೀಸರು ರಾಜ್ಯಾದ್ಯಂತ ಶೋಧ ನಡೆಸುತ್ತಿದ್ದಾರೆ. ಆದರೆ ಅವರು ತಲೆಮರೆಸಿಕೊಂಡಿದ್ದಾರೆ.
ಬಿಎಸ್ಪಿಗೆ ಸೇರಿದವರು ತನಗೆ ಹಾಗೂ ಮಗಳಿಗೆ ಕರೆ ಮಾಡಿ ಬೈಯುತ್ತಿದ್ದಾರೆ. ಆಕೆ ಆಘಾತಕ್ಕೊಳಗಾಗಿದ್ದಾಳೆ. ಅವರು ಈ ವಿವಾದದಲ್ಲಿ ಮಗಳನ್ನೂ ಎಳೆಯು ತ್ತಿದ್ದಾರೆ. ತಮ್ಮಾಂದಿಗೆ ನಿಲ್ಲುವವರು ಯಾರೂ ಇಲ್ಲ. ತನ್ನ ಮಗಳು ಅಪ್ರಾಪ್ತ ವಯಸ್ಕಳಾಗಿದ್ದು, ಆಕೆಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಸ್ವಾತಿ ಶುಕ್ರವಾರ ತಿಳಿಸಿದ್ದಾರೆ.
ಒಬ್ಬ ಮನುಷ್ಯನಿಗೆ ಒಂದೇ ತಪ್ಪಿಗೆ ಹಲವು ಬಾರಿ ಶಿಕ್ಷಿಸಬಹುದೇ? ತನ್ನ ಮಕ್ಕಳಿಗೆ ಏನಾದರೂ ಆದರೆ, ಅದರ ಹೊಣೆಯನ್ನು ಮಾಯಾವತಿ ಹೊರು ತ್ತಾರೆಯೇ? ಎಂದವರು ಪ್ರಶ್ನಿಸಿದ್ದಾರೆ.
ಮಾಯಾವತಿಯವರ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿದುದಕ್ಕಾಗಿ ಉತ್ತರಪ್ರದೇಶ ಬಿಜೆಪಿಯ ಉಪಾಧ್ಯಕ್ಷನಾಗಿದ್ದ ದಯಾ ಶಂಕರ್‌ರನ್ನು ಪಕ್ಷದಿಂದ 6 ವರ್ಷ ಕಾಲಕ್ಕೆ ಉಚ್ಚಾಟಿಸಲಾಗಿದೆ. ಅವರ ವಿರುದ್ಧ ಬಿಎಸ್ಪಿ ಪೊಲೀಸ್ ದೂರೊಂದನ್ನು ದಾಖಲಿಸಿದೆ.





