ನಾಪತ್ತೆಯಾದ ವಿಮಾನದಲ್ಲಿ ಬೆಳ್ತಂಗಡಿಯ ಯೋಧ?

ಬೆಳ್ತಂಗಡಿ, ಜು.22: ಚೆನ್ನೈಯಿಂದ ಪೋರ್ಟ್‌ಬ್ಲೇರ್‌ಗೆ ಹೋಗುತ್ತಿದ್ದ ವೇಳೆ ನಾಪತ್ತೆಯಾಗಿರುವ ವಾಯುಸೇನೆಯ ವಿಮಾನದಲ್ಲಿ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ವ್ಯಕ್ತಿಯೋರ್ವರು ಇದ್ದ ಬಗ್ಗೆ ಮಾಹಿತಿಯಿದ್ದು, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಭಾರತೀಯ ಸೇನೆಯಿಂದ ಲಭ್ಯವಾಗಿಲ್ಲ. ಗುರುವಾಯನಕೆರೆ ನಿವಾಸಿ, ಭಾರತೀಯ ಸೇನೆಯಲ್ಲಿ ದುಡಿಯುತ್ತಿರುವ ಏಕನಾಥ ಶೆಟ್ಟಿ ಎಂಬವರು ವಿಮಾನದಲ್ಲಿ ಇದ್ದರು ಎನ್ನಲಾಗಿದೆ. ಶುಕ್ರವಾರ ಮಧ್ಯಾಹ್ನದ ವೇಳೆಗೆ ಬಂದಿರುವ ದೂರವಾಣಿ ಕರೆಯೊಂದು ಏಕನಾಥ ಶೆಟ್ಟಿ ಈ ವಿಮಾನದಲ್ಲಿ ಇದ್ದರು ಎಂದು ಮಾಹಿತಿ ನೀಡಿದೆ. ಆ ಬಳಿಕ ಏಕನಾಥ ಶೆಟ್ಟಿಯವರನ್ನು ಸಂಪರ್ಕಿಸಲು ಮನೆಯವರು ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾಗಿವೆ ಎಂದು ತಿಳಿದು ಬಂದಿದ್ದು, ಮನೆಯವರು ಇದೀಗ ಆತಂಕದಲ್ಲಿದ್ದಾರೆ. ಆದರೆ ಏಕನಾಥ ನಾಪತ್ತೆಯಾಗಿರುವ ಬಗ್ಗೆ ಯಾವುದೇ ಅಧಿಕೃತವಾದ ಮಾಹಿತಿಗಳು ಎಲ್ಲಿಂದಲೂ ಬಂದಿಲ್ಲ. ಅದೇ ರೀತಿ ಸೇನೆ ಇನ್ನೂ ವಿಮಾನದಲ್ಲಿದ್ದವರ ಹೆಸರುಗಳನ್ನು ಬಹಿರಂಗ ಮಾಡದಿರುವುದರಿಂದ ಈ ಬಗ್ಗೆ ಎಲ್ಲರೂ ಗೊಂದಲದಲ್ಲಿಯೇ ಇದ್ದಾರೆ. ಅಧಿಕೃತ ಮಾಹಿತಿಗಳು ಇನ್ನಷ್ಟೇ ಸಿಗಬೇಕಾಗಿದೆ.





