ಹೊಸ ಶಸ್ತ್ರಗಳನ್ನು ಪ್ರದರ್ಶಿಸಿದ ಚೀನಾ ಸೇನೆ
ದಕ್ಷಿಣ ಚೀನಾ ಸಮುದ್ರ ಬಿಕ್ಕಟ್ಟು
ಬೀಜಿಂಗ್, ಜು. 22: ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದಂತೆ ಹೇಗ್‌ನ ಅಂತಾರಾಷ್ಟ್ರೀಯ ಪಂಚಾಯಿತಿ ನ್ಯಾಯಮಂಡಳಿ ನೀಡಿರುವ ತೀರ್ಪಿನ ಬೆನ್ನಿಗೇ, ಚೀನಾ ಸೇನೆ ದೀರ್ಘ ವ್ಯಾಪ್ತಿಯ ಕ್ಷಿಪಣಿಗಳು ಸೇರಿದಂತೆ ನೂತನ ಶಸ್ತ್ರಾಸ್ತ್ರಗಳನ್ನು ಅನಾವರಣಗೊಳಿಸಿದೆ.
ಅದೇ ವೇಳೆ, ಯುದ್ಧಕ್ಕೆ ಸಿದ್ಧರಾಗಿರುವಂತೆ ಚೀನಾದ ಹಿರಿಯ ನಾಯಕರು ಸೇನೆಗೆ ಕರೆ ಕೊಡುತ್ತಿದ್ದಾರೆ.
ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾಕ್ಕೆ ಐತಿಹಾಸಿಕ ಹಕ್ಕಿಲ್ಲ ಎಂಬುದಾಗಿ ನ್ಯಾಯಮಂಡಳಿ ಹೇಳಿರುವುದನ್ನು ಸ್ಮರಿಸಬಹುದಾಗಿದೆ. ದಕ್ಷಿಣ ಚೀನಾ ಸಮುದ್ರದ ಉಸ್ತುವಾರಿಯನ್ನು ಹೊಂದಿರುವ ಪೀಪಲ್ಸ್ ಲಿಬರೇಶನ್ ಆರ್ಮಿಯ ಸದರ್ನ್ ಥಿಯೇಟರ್ ಕಮಾಂಡ್, ಹಿರಿಯ ಸೇನಾಧಿಕಾರಿಗಳ ಭೇಟಿಯ ವೇಳೆ ಸಮುದ್ರ ಮತ್ತು ವೈಮಾನಿಕ ಯುದ್ಧಗಳಲ್ಲಿ ಬಳಸಬಹುದಾದ ಹಲವಾರು ನೂತನ ಅಸ್ತ್ರಗಳನ್ನು ಪ್ರದರ್ಶಿಸಿತು.
ಅಮೆರಿಕದ ವಿರುದ್ಧ ಸೇನಾ ಸಂಘರ್ಷವೇನಾದರೂ ಏರ್ಪಟ್ಟರೆ, ನೂತನವಾಗಿ ರಚಿಸಲಾಗಿರುವ ಸದರ್ನ್ ಥಿಯೇಟರ್ ಕಮಾಂಡ್ ಯುದ್ಧಕ್ಕೆ ಸನ್ನದ್ಧವಾಗಿದೆ ಎನ್ನುವುದನ್ನು ತೋರಿಸುವ ಚೀನಾದ ಪ್ರಯತ್ನ ಇದಾಗಿರುವ ಸಾಧ್ಯತೆಯಿದೆ ಎಂದು ಹಾಂಕಾಂಗ್‌ನ ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ಶುಕ್ರವಾರ ವರದಿ ಮಾಡಿದೆ.





