ಕುಳಾಯಿ ಬಂದರು ಕಾಮಗಾರಿ ಶೀಘ್ರ ಆರಂಭ: ರಾಮಚಂದರ್
ಮಂಗಳೂರು, ಜು.22: ಮೀನುಗಾರರು ಇತ್ತೀಚೆಗೆ ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕುಳಾಯಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸರ್ವ ಋತು ಮೀನುಗಾರಿಕೆ ಬಂದರು ಪ್ರಸ್ತಾವವನ್ನು ರಾಜ್ಯ ಸರಕಾರ ಮಂಜೂರಾತಿಗಾಗಿ ಕೇಂದ್ರಕ್ಕೆ ಕಳುಹಿಸಿದೆ ಎಂದು ಹೋರಾಟ ಸಮಿತಿಯ ಸಂಚಾಲಕ ರಾಮಚಂದರ್ ಬೈಕಂಪಾಡಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
20ವರ್ಷಗಳಿಂದ ಸಾಂಪ್ರದಾಯಿಕ ಮೀನುಗಾರಿಕೆ ನಡೆಸಲು ನವಮಂಗಳೂರು ಬಂದರು ಮೂಲಕ ಸುಮಾರು 300ಮಂದಿಗೆ ಅವಕಾಶ ನೀಡಲಾಗಿದೆ. ನವಮಂಗಳೂರು ಬಂದರಿನ ಸುರಕ್ಷತಾ ದೃಷ್ಟಿಯಿಂದ ಕುಳಾಯಿಯಲ್ಲಿ ಪ್ರತ್ಯೇಕ ಸರ್ವಋತು ಮೀನುಗಾರಿಕೆ ಬಂದರು ನಿರ್ಮಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ನವ ಮಂಗಳೂರು ಬಂದರು 70 ಕೋ.ರೂ. ದೇಣಿಗೆ ನೀಡಿದೆ ಎಂದವರು ನುಡಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಾಂಪ್ರದಾಯಿಕ ಮೀನುಗಾರ ಮಹಿಳೆಯರಿಗೆ ಶೇ.3 ಬಡ್ಡಿ ದರದಲ್ಲಿ 50.000 ರೂ. ಜಾಮೀನು ರಹಿತ ಸಾಲ ಯೋಜನೆ ಜಾರಿಗೊಳಿಸಿದ್ದರು. ಈ ಯೋಜನೆಯಡಿ ಮೊದಲ ವರ್ಷ ಶೇ.9 ಸಬ್ಸಿಡಿ ಹಣ ನೀಡಿದ್ದನ್ನು ಬಿಟ್ಟರೆ ಕಳೆದ ಎರಡು ವರ್ಷಗಳಿಂದ ಸಬ್ಸಿಡಿ ಜಮಾ ಮಾಡದೆ ಮೀನುಗಾರ ಮಹಿಳೆಯರನ್ನು ಸತಾಯಿಸಲಾಗುತ್ತಿದೆ ಎಂದು ಅವರು ದೂರಿದರು.
ಸುದ್ದಿಗೋಷ್ಠಿಯಲ್ಲಿ 14 ಪಟ್ನ ಮೊಗವೀರ ಸಭೆ ಅಧ್ಯಕ್ಷ ರಾಜೀವ್ ಕಾಂಚನ್, ವಾಮನ್ ಅಮೀನ್ ಬೈಕಂಪಾಡಿ, ಧರ್ಮ ಕೋಟ್ಯಾನ್ ಉಪಸ್ಥಿತರಿದ್ದರು.





