ಜುಲೈ 25ಕ್ಕೆ ಬಿಎಸ್ಪಿಯಿಂದ ಉತ್ತರ ಪ್ರದೇಶದಾದ್ಯಂತ ಬಿಜೆಪಿ ವಿರುದ್ಧ ಪ್ರತಿಭಟನೆ

ಆಗ್ರಾ, ಜು.23: ಪಕ್ಷದ ನಾಯಕಿ ಮಾಯಾವತಿ ವಿರುದ್ಧ ಬಿಜೆಪಿ ಮುಖಂಡ ದಯಾಶಂಕರ್ ನೀಡಿದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ, ಈ ತಿಂಗಳ 25ರಂದು ಉತ್ತರ ಪ್ರದೇಶದಾದ್ಯಂತ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಲು ಬಹುಜನ ಸಮಾಜ ಪಕ್ಷ ನಿರ್ಧರಿಸಿದೆ.
ಬಿಎಸ್ಪಿ ವಿಭಾಗೀಯ ಸಂಚಾಲಕ ಸುನೀಲ್ ಚಿತೋರ್ ಈ ಬಗ್ಗೆ ಹೇಳಿಕೆ ನೀಡಿ, ಬಿಜೆಪಿ ಮುಖಂಡ ದಯಾಶಂಕರ್ ಅವರ ಹೇಳಿಕೆಗೆ ಬಿಜೆಪಿ ವಿಷಾದ ವ್ಯಕ್ತಪಡಿಸಿರುವುದು ನಾಚಿಕೆಗೇಡು. ದಲಿತವಿರೋಧಿ ಪಕ್ಷವಾದ ಬಿಜೆಪಿ ರಾಜ್ಯದಲ್ಲಿ ಕೋಮು ಹಾಗೂ ಜಾತಿ ಸಂಘರ್ಷವನ್ನು ತಂದಿಕ್ಕಿ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆಸಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯಾದ್ಯಂತ ಅಂದು ನಡೆಯುವ ಧರಣಿ ಅಂಗವಾಗಿ ಸ್ಥಳೀಯ ಜಿಐಸಿ ಮೈದಾನಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ. ದಯಾಶಂಕರ್ ಅವರನ್ನು ಶಿಕ್ಷಿಸುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಪ್ರಕಟಿಸಿದರು.
ಗೋಸಂರಕ್ಷಣೆ ಹೆಸರಿನಲ್ಲಿ ದಲಿತರ ಮೇಲೆ ಗುಜರಾತ್‌ನಲ್ಲಿ ಅಮಾನುಷವಾಗಿ ಹಲ್ಲೆ ನಡೆಸಿದ ಕ್ರೌರ್ಯದ ಬಗೆಗಿನ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಿಜೆಪಿ ವಿರುದ್ಧ ಆಕ್ರೋಶದ ಕಟ್ಟೆಯೊಡೆದಿದೆ ಎಂದು ಹೇಳಿದರು.





