ಮ್ಯೂನಿಕ್ ನಗರದಲ್ಲಿ ಬಂದೂಕುಧಾರಿಯಿಂದ ಗುಂಡು ಹಾರಾಟ 9 ಸಾವು, 16 ಮಂದಿಗೆ ಗಾಯ
ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ದುಷ್ಕರ್ಮಿ

ಮ್ಯೂನಿಕ್, ಜು. 23: ಜರ್ಮನಿಯ ಮ್ಯೂನಿಕ್ ನಗರದ ವ್ಯಾಪಾರಿ ಸಂಕೀರ್ಣವೊಂದರಲ್ಲಿ ಶುಕ್ರವಾರ ಸಂಜೆ ಬಂದೂಕು ದಾಳಿ ನಡೆಸಿದ 18 ವರ್ಷ ಪ್ರಾಯದ ಜರ್ಮನ್-ಇರಾನಿಯನ್ ವ್ಯಕ್ತಿಯೋರ್ವ ಒಂಬತ್ತು ಮಂದಿಯನ್ನು ಹತ್ಯೆ ಮಾಡಿದ್ದಾನೆ.
ದಾಳಿಯಲ್ಲಿ ಹಲವು ಮಕ್ಕಳು ಸೇರಿದಂತೆ ಕನಿಷ್ಠ 16 ಮಂದಿ ಗಾಯಗೊಂಡಿದ್ದಾರೆ ಹಾಗೂ ಆ ಪೈಕಿ ಮೂರು ಮಂದಿಯ ಸ್ಥಿತಿ ಗಂಭೀರವಾಗಿದೆ.
ದಾಳಿಕೋರ ಬಳಿಕ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮ್ಯೂನಿಕ್ ಪೊಲೀಸ್ ಮುಖ್ಯಸ್ಥ ಹ್ಯುಬರ್ಟಸ್ ಆ್ಯಂಡ್ರೇ ತಿಳಿಸಿದರು.
ದುಷ್ಕರ್ಮಿ ಜರ್ಮನಿ ಮತ್ತು ಇರಾನ್ ಎರಡೂ ದೇಶಗಳ ಪ್ರಜೆಯಾಗಿದ್ದಾನೆ ಎಂದು ಅವರು ಹೇಳಿದರು.
ದುಷ್ಕರ್ಮಿಯು ತನ್ನ ತಲೆಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡನು ಎಂದು ಜರ್ಮನಿಯ ನ್ಯೂಸ್ ಮ್ಯಾಗಝಿನ್ ‘ಫೋಕಸ್’ ತಿಳಿಸಿದೆ.
ಬಿಯರ್ ಉತ್ಸವದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಶುಕ್ರವಾರ ಸಾವಿರಾರು ಮಂದಿ ಮ್ಯೂನಿಕ್ ನಗರದ ಮಧ್ಯ ಭಾಗದ ರಸ್ತೆಗಳು ಮತ್ತು ಚೌಕಗಳಲ್ಲಿ ಸೇರಿದ್ದರು. ಆಗ ಈ ದಾಳಿ ನಡೆಯಿತು.
ಮ್ಯೂನಿಕ್‌ನಲ್ಲಿ ನಡೆದದ್ದು ಭಯೋತ್ಪಾದಕ ದಾಳಿಯೇ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದು ಭಯೋತ್ಪಾದಕ ದಾಳಿ ಎಂಬುದನ್ನು ಸೂಚಿಸುವ ಪುರಾವೆ ತಮಗೆ ಸಿಕ್ಕಿಲ್ಲ ಎಂದಿದ್ದಾರೆ.
ಆರಂಭದಲ್ಲಿ, ಗುಂಡು ಹಾರಾಟ ಘಟನೆಯಲ್ಲಿ ಕನಿಷ್ಠ ಮೂವರ ಶಾಮೀಲಾಗಿರಬಹುದು ಎಂಬುದಾಗಿ ಪೊಲೀಸರು ಭಾವಿಸಿದ್ದರು.
ಆದರೆ, ಶನಿವಾರ ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧಿಕಾರಿಗಳು, ಇದು ಒಬ್ಬನೇ ನಡೆಸಿದ ಹತ್ಯಾಕಾಂಡ ಎಂಬುದಾಗಿ ತಾವು ಭಾವಿಸಿದ್ದೇವೆ ಎಂದು ತಿಳಿಸಿದರು.
ದಕ್ಷಿಣ ಜರ್ಮನಿಯಲ್ಲಿ ಸೋಮವಾರ ನಡೆದ ಘಟನೆಗೂ ಈ ಘಟನೆಗೂ ಯಾವುದೇ ಹೋಲಿಕೆ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು. ಸೋಮವಾರ ನಡೆದ ಘಟನೆಯಲ್ಲಿ 17 ವರ್ಷದ ನಿರಾಶ್ರಿತನೊಬ್ಬ ರೈಲೊಂದರಲ್ಲಿ ಕೊಡಲಿಯಿಂದ ದಾಳಿ ನಡೆಸಿದ್ದು, ಐವರನ್ನು ಕೊಂದಿದ್ದನು. ಆ ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿತ್ತು.
ಶುಕ್ರವಾರದ ಘಟನೆ ಭಯೋತ್ಪಾದಕ ಕೃತ್ಯವೇ ಅಥವಾ ಮಾನಸಿಕ ಅಸ್ವಸ್ಥನೊಬ್ಬ ನಡೆಸಿದ ದಾಂಧಲೆಯೇ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಆ್ಯಂಡ್ರೇ ಹೇಳಿದರು.
ಗುಂಡು ಹಾರಾಟದ ಬಳಿಕ, ಜರ್ಮನಿಯ ಮೂರನೆ ಬೃಹತ್ ನಗರ ಸ್ತಬ್ಧಗೊಂಡಿತು. ಸಾರಿಗೆ ಸಂಚಾರ ಸ್ಥಗಿತಗೊಂಡಿತು ಹಾಗೂ ಹೆದ್ದಾರಿಗಳನ್ನು ಮುಚ್ಚಲಾಯಿತು. ಹೆಚ್ಚಿನ ಸಂಖ್ಯೆಯ ಸಂಭಾವ್ಯ ಆಕ್ರಮಣಕಾರರಿಗಾಗಿ ಪೊಲೀಸರು ಶೋಧ ನಡೆಸಲು ಸಾಧ್ಯವಾಗುವಂತೆ ನಗರದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು.
ಪೊಲೀಸರು ಶನಿವಾರ ಮುಂಜಾನೆ ಮ್ಯೂನಿಕ್‌ನ ಉಪನಗರ ಮ್ಯಾಕ್ಸ್‌ವೊರ್ಸ್‌ಟಾಟ್‌ನಲ್ಲಿರುವ ಅಪಾರ್ಟ್‌ಮೆಂಟೊಂದಕ್ಕೆ ದಾಳಿ ನಡೆಸಿದರು. ಆದರೆ, ಆ ಮನೆ ದಾಳಿಕೋರನದಾಗಿತ್ತೆ ಎಂಬುದನ್ನು ತಿಳಿಸಲು ಪೊಲೀಸ್ ವಕ್ತಾರರೊಬ್ಬರು ನಿರಾಕರಿಸಿದರು.





