ಮಾತಿನ ಮೋಡಿಯ ಮೋದಿ ಮೌನವಾದ 5 ಸಂದರ್ಭಗಳು

ಹೊಸದಿಲ್ಲಿ, ಜು.23: ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯ ಮೌನವನ್ನು ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಜ್ಯೋತಿರಾದಿತ್ಯ ಸಿಂಧ್ಯ ಟೀಕಿಸಿದ್ದರು. ಆದರೆ ಪ್ರಮುಖ ವಿಚಾರಗಳ ಬಗ್ಗೆ ಮೋದಿ ಹಾಗೂ ಆಡಳಿತ ಪಕ್ಷದ ಮೌನ ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದು ಇದೇ ಮೊದಲ ಬಾರಿಯಲ್ಲ.
ಸರಕಾರದ ಕೆಲ ಪ್ರಮುಖರಾದ ವಾರ್ತಾ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡು ಸಹಿತ ಕೆಲವರು ಈ ಹಿಂದಿನ ಇಂತಹ ಆರೋಪಗಳಿಗೆ ಪ್ರಧಾನ ಮಂತ್ರಿ ರನ್ನಿಂಗ್ ಕಮೆಂಟರಿ ನೀಡುವ ಅಗತ್ಯವಿಲ್ಲ ಎಂಬ ಉತ್ತರ ನೀಡಿದ್ದರಲ್ಲದೆ, ಅಗತ್ಯ ಬಿದ್ದಾಗ ಸರಕಾರ ಹಾಗೂ ಮೋದಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆಂದೂ ಹೇಳಿದ್ದರು.
ಹಿಂದಿನ ಯುಪಿಎ ಆಡಳಿತದಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮೌನವ್ರತ ಆಚರಿಸುತ್ತಿದ್ದಾರೆಂದು ಆರೋಪಿಸುತ್ತಿದ್ದ ಬಿಜೆಪಿ ಇಂದು ಅದೇ ಆರೋಪ ಎದುರಿಸುತ್ತಿದೆ.
ಪ್ರಧಾನಿ ಮೋದಿ ಮೌನವಾದ ಐದು ಸಂದರ್ಭಗಳು
1. ಜುಲೈ 2016 :
ಉಗ್ರ ಬುರ್ಹಾನ್ ವಾನಿ ಹತ್ಯೆಯ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಸುರಕ್ಷಾ ಪಡೆಗಳು ಹಾಗೂ ನಾಗರಿಕರ ನಡುವೆ ಯುದ್ಧ ಸನ್ನಿವೇಶವೇ ಉಂಟಾಗಿ ಗಲಭೆ ತಾಂಡವವಾಡುತ್ತಿದ್ದರೂ, ಪ್ರಧಾನಿ ಸಂಸತ್ತಿನಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದ್ದರು.
2. ಫೆಬ್ರವರಿ 2016 :
ಹೈದರಾಬಾದ್ ವಿಶ್ವವಿದ್ಯಾನಿಲಯದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ಹಾಗೂ ತದನಂತರ ಜೆಎನ್ ಯು ವಿದ್ಯಾರ್ಥಿ ಯೂನಿಯನ್ ನಾಯಕ ಕನ್ಹಯ್ಯಾ ಕುಮಾರ್ ಬಂಧನ ಸಾಕಷ್ಟು ವಿವಾದಕ್ಕೀಡಾದರೂ ಪ್ರಧಾನಿ ತುಟಿ ಪಿಟಿಕ್ಕೆಂದಿರಲಿಲ್ಲ.
3.ಜೂನ್ 2015:
ಐಪಿಎಲ್ ನ ಮೊದಲ ಅಧ್ಯಕ್ಷ ಲಲಿತ್ ಮೋದಿಗೆ ಸರಕಾರ ಸಹಾಯ ಮಾಡಿತ್ತೆಂಬ ಆರೋಪದ ಹಿನ್ನೆಲೆಯಲ್ಲಿ ಉಂಟಾದ ವಿವಾದದಲ್ಲಿ ವಿಪಕ್ಷಗಳು ಪ್ರಧಾನಿ ವಿವರ ಕೇಳಿದ್ದರೂ ಪ್ರಧಾನಿ ಮೌನವಾಗಿದ್ದರು.
4. ಅಕ್ಟೋಬರ್ 2015:
ದಾದ್ರಿಯಲ್ಲಿ ಮುಹಮ್ಮದ್ ಅಖ್ಲಾಖ್ ಎಂಬ ವ್ಯಕ್ತಿ ಮನೆಯಲ್ಲಿ ಗೋಮಾಂಸವಿದೆಯೆಂಬ ಆರೋಪಕ್ಕೊಳಪಟ್ಟು ಹತ್ಯೆಗೀಡಾಗಿದ್ದು ಬಹಳ ದೊಡ್ಡ ಸುದ್ದಿಯಾದರೂ, ಪ್ರಧಾನಿ ಏನೂ ಆಗಿಲ್ಲವೆಂಬಂತೆ ಮೌನ ವಹಿಸಿದ್ದರು.
5. ಡಿಸೆಂಬರ್ 2014 :
ಮತಾಂತರ ವಿರೋಧಿ ಕಾನೂನನ್ನು ಬೆಂಬಲಿಸಬೇಕೆಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಎಲ್ಲಾ ರಾಜಕೀಯ ಪಕ್ಷಗಳಿಗೂ ಕರೆ ನೀಡಿದ್ದು ವಿವಾದಕ್ಕೆಡೆ ಮಾಡಿ ಕೊಟ್ಟು ವಿಪಕ್ಷಗಳು ಪ್ರಧಾನಿಯ ಸ್ಪಷ್ಟೀಕರಣ ಕೇಳಿದ್ದವು. ಆಗಲೂ ಮೋದಿ ಮಾತನಾಡದೇ ಇರಲು ನಿರ್ಧರಿಸಿದ್ದರು.







