ಮೊದಲ ದಿನವೇ ದಾಖಲೆಗಳನ್ನು ಧೂಳೀಪಟ ಮಾಡಿದ ಕಬಾಲಿ

ಹೊಸದಿಲ್ಲಿ, ಜು.23: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಕಬಾಲಿ ಜುಲೈ 22 ರಂದು ಥಿಯೇಟರುಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿತ್ತಲ್ಲದೆ ಎಲ್ಲಾ ದಾಖಲೆಗಳನ್ನೂ ಮೊದಲ ದಿನವೇ ಧೂಳೀಪಟ ಮಾಡಿದೆ. ಈ ಚಿತ್ರ ಇನ್ನೂ ಹಲವು ಮೈಲುಗಲ್ಲುಗಳನ್ನು ತಲುಪುವ ನಿರೀಕ್ಷೆ ಇದೆ.
ಶುಕ್ರವಾರ ಬೆಳಗ್ಗೆ 4 ಗಂಟೆಗೆ ಆರಂಭವಾದ ವಿಶೇಷ ಪ್ರದರ್ಶನವೂ ಸೇರಿದಂತೆ 3,000 ರೂ. ಟಿಕೆಟ್ ಶುಲ್ಕ ನೀಡಲೂ ಅಭಿಮಾನಿಗಳು ಹಿಂದೆ ಮುಂದೆ ನೋಡದೆ ರಜನಿ ಮೇನಿಯಾ ಇನ್ನೂ ಅಸ್ತಿತ್ವದಲ್ಲಿದೆಯೆಂಬುದನ್ನು ಸಾಬೀತು ಪಡಿಸಿದರು.
ಕಬಾಲಿಯ ಮೊದಲ ದಿನದ ಕಲೆಕ್ಷನ್ ಅಂದಾಜು 65 ಕೋಟಿ ರೂ.ಗೂ ಅಧಿಕವಾಗಿರಬಹುದೆಂದು ಹೇಳಲಾಗಿದ್ದು, ವಾರಾಂತ್ಯಕ್ಕೆ ಅದು ಇತರ ಎಲ್ಲಾ ಚಿತ್ರಗಳ ದಾಖಲೆಗಳನ್ನು ಮುರಿಯುವ ಸಂಭವವಿದೆ. ಪ್ರಥಮ ಮೂರು ದಿನಗಳಲ್ಲಿ ಕಬಾಲಿಯ ಕಲೆಕ್ಷನ್ 170 ಕೋಟಿ ರೂ. ದಾಟಬಹುದೆಂದು ನಿರೀಕ್ಷಿಸಲಾಗಿದೆ.
ಕಬಾಲಿ ಈಗಾಗಲೇ ಆಮಿರ್ ಖಾನ್ ಅವರ ಪಿಕೆ ಹಾಗೂ ಸಲ್ಮಾನ್ ಖಾನ್ ಅವರ ಸುಲ್ತಾನ್ ಚಿತ್ರದ ದಾಖಲೆಗಳನ್ನು ಅಮೆರಿಕದಲ್ಲಿ ಮುರಿದಿದೆ. ಈ ಎರಡೂ ಚಿತ್ರಗಳು ಮೊದಲ ದಿನ ಕ್ರಮವಾಗಿ 1,418,817 $ ಹಾಗೂ 784,194 $ ಸಂಗ್ರಹಿಸಿದ್ದರೆ, ಕಬಾಲಿ 1,922,995 $ ಸಂಗ್ರಹಿಸಿದೆ.





