ಬಿಪಿಎಲ್ ಪಟ್ಟಿಯಲ್ಲಿ ದಿಗ್ವಿಜಯ್ ಸಿಂಗ್ ಹೆಸರು...!

ಭೋಪಾಲ್, ಜು.23: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೆಸರು ಬಿಪಿಎಲ್ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ವಿಚಾರ ಬೆಳಕಿಗೆ ಬಂದಿದ್ದು, ಈ ಬಗ್ಗೆ ಗರಂ ಆಗಿರುವ ಬಿಜೆಪಿ "ಮಾನಸಿಕವಾಗಿ ದುರ್ಬಲವಾಗಿರುವ ಮಾಜಿ ಮುಖ್ಯ ಮಂತ್ರಿ ದಿಗ್ವಿಜಯ್ ಸಿಂಗ್ ಅವರು ತನ್ನ ಹೆಸರು ಹೇಗೆ ಬಿಪಿಎಲ್ ಪಟ್ಟಿಯಲ್ಲಿ ಸೇರಿಕೊಂಡಿತು ಎಂದು ವಿವರಣೆ ನೀಡುವಂತೆ ಒತ್ತಾಯಿಸಿದೆ.
" ದಿಗ್ವಿಜಯ್ ಸಿಂಗ್‌ಗೆ ಇದೊಂದು ಸವಾಲಾಗಿದೆ. ತನ್ನ ಹೆಸರು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಪಟ್ಟಿಯಲ್ಲಿ ಹೇಗೆ ಸೇರಿಕೊಂಡಿತು ಎಂದು ವಿವರಣೆ ನೀಡಬೇಕು. ಅವರು ಮಾನಸಿಕವಾಗಿ ದುರ್ಬಲವಾಗಿರುವಂತೆ ಇದ್ದಾರೆ. ಯಾವ ಕಾರಣಕ್ಕಾಗಿ ಅವರನ್ನು ಬಿಪಿಎಲ್ ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಅವರು ಯಾವ ಕಾರಣವನ್ನು ಮುಂದಿಟ್ಟು ಬಿಪಿಎಲ್ ಕಾರ್ಡ್‌ಗೆ ಅರ್ಜಿ ಹಾಕಿದ್ದಾರೆ. ಬಿಪಿಎಲ್ ಮೂಲಕ ಯಾವ ರೀತಿಯ ಪ್ರಯೋಜನವನ್ನು ಪಡೆಯಲು ಬಯಸಿದ್ದಾರೆ ಎಂದು ಸ್ಪಷ್ಟನೆ ನೀಡುವಂತೆ ಬಿಜೆಪಿ ನಾಯಕ ರಾಮೇಶ್ವರ ಶರ್ಮ ಆಗ್ರಹಿಸಿದ್ದಾರೆ.
"ಒಂದು ವೇಳೆ ದಿಗ್ವಿಜಯ ಸಿಂಗ್ ಬಡವರಾಗಿದ್ದರೆ ಅವರು ಅದಕ್ಕಾಗಿ ಅರ್ಜಿ ಹಾಕಬೇಕು. ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಅವರು ಬಡವರಾಗಿದಿದ್ದರೆ ಅವರು ಇದನ್ನು ಪ್ರಶ್ನಿಸಬೇಕಿತ್ತು. ಒಂದು ವೇಳೆ ಅವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರೆ ಕರ್ತವ್ಯ ಲೋಪ ಮಾಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಅವಕಾಶ ಇತ್ತು” ಎಂದು ರಾಮೇಶ್ವರ ಶರ್ಮ ಅವರು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದಕ್ಕೆ ಮೊದಲು ಮಧ್ಯಪ್ರದೇಶ ಸರಕಾರ ಮತ್ತು ಭಾರತ ಸರಕಾರ ನನ್ನ ಹೆಸರು, ನನ್ನ ಸೋದರನ ಹೆಸರು ಮತ್ತು ನನ್ನ ಮಗನ ಹೆಸರನ್ನು ಬಿಪಿಎಲ್ ಪಟ್ಟಿಯಲ್ಲಿ ಸೇರಿಸಿಕೊಂಡಿವೆ. ನಾವು ಎಲ್ಲರೂ ತೆರಿಗೆ ಪಾವತಿದಾರರು. ನಾವು ಬಿಪಿಎಲ್ ಪಟ್ಟಿಯಲ್ಲಿ ಸೇರಿಸಲು ಅರ್ಜಿ ಸಲ್ಲಿಸಿಲ್ಲ ಮತ್ತು ಬಿಪಿಎಲ್ ಕಾರ್ಡ್‌ದಾರರಿಗೆ ನೀಡಲಾಗುವ ಯಾವುದೇ ಪ್ರಯೋಜನವನ್ನು ಪಡೆದಿಲ್ಲ. ಇದೊಂದು ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಮಾಡಿರುವ ವ್ಯವಸ್ಥಿತ ಸಂಚು ಆಗಿದೆ. ಯಾರು ಇಂತಹ ತಪ್ಪು ಮಾಡಿದ್ದಾರೋ ಅಂತಹ ವ್ಯಕ್ತಿಗಳು ಕ್ಷಮೆಯಾಚಿಸಲು ಮತ್ತು ಶಿಕ್ಷೆ ಅನುಭವಿಸಲು ಅರ್ಹರು " ದಿಗ್ವಿಜಯ್ ಸಿಂಗ್ ಹೇಳಿದ್ದಾರೆ,





