ಹಾಸನ: ಆತ್ಮಹತ್ಯೆಗೆ ಯತ್ನಿಸಿದ ಎಸಿ ವಿಜಯಾರ ಆರೋಗ್ಯ ವಿಚಾರಿಸಿದ ಸಚಿವ ಎ.ಮಂಜು

ಹಾಸನ, ಜು.23: ಆತ್ಮಹತ್ಯೆಗೆ ಯತ್ನಿಸಿದ ಹಾಸನ ಉಪವಿಭಾಗಾಧಿಕಾರಿ ವಿಜಯಾರ ಆರೋಗ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಆಸ್ಪತ್ರೆಗೆ ತೆರಳಿ ವಿಚಾರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎಸಿ ವಿಜಯಾ ಈಗಾಗಲೇ ಗುಣಮುಖರಾಗಿದ್ದಾರೆ. ಕೆಲ ದಿನಗಳಲ್ಲೆ ಕರ್ತವ್ಯಕ್ಕೆ ಹಾಜರಾಗುವರು ಎಂದು ಹೇಳಿದರು. ಆತ್ಮಹತ್ಯೆಯಂತಹ ಕೆಲಸಕ್ಕೆ ಕೈಹಾಕಿದ ಬಗ್ಗೆ ಕಾರಣ ಹೇಳಲಿಲ್ಲ. ಆದರೆ ಕೆಲ ಒತ್ತಡವೇ ಕಾರಣ ಎಂದು ವಿಜಯಾ ತಿಳಿಸಿದ್ದಾರೆ. ಆದರೆ, ಜಿಲ್ಲೆಯಲ್ಲಿ ಜೆಡಿಎಸ್ ಕುಟುಂಬಕ್ಕೆ ಅಧಿಕಾರ ಸಿಗಲಿಲ್ಲ ಎಂದು ಹತಾಶರಾಗಿ ನನ್ನ ಮೇಲೆ ಇಲ್ಲಸಲ್ಲದ ಹೇಳಿಕೆ ನೀಡಿ ಆರೋಪಿಸಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಮೇಲೆ ಆರೋಪ ಮಾಡುವ ಇವರು ಕಳೆದ 20 ದಿನಗಳ ಹಿಂದೆ ಈಕೆಯ ಮೇಲೆ ಏನು ಮಾತನಾಡಿದ್ದರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು. ಅಧಿಕಾರದಲ್ಲಿ ಇರುವಾಗ ಪರ-ವಿರೋಧ ಬರುವುದು ಸಹಜ. ಎಲ್ಲವನ್ನು ಮೀರಿ ಕೆಲಸ ಮಾಡುವ ಮೂಲಕ ಮುಂದೆ ಬಂದರೆ ಉತ್ತಮ ಫಲಿತಾಂಶ ಬರುತ್ತದೆ ಎಂದು ಸಲಹೆ ನೀಡಿದರು. ಆದರೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ ಎಂದು ಹೇಳಿದರು.





