ಟ್ರಂಪ್ ಕೊಟ್ಟಿದ್ದು ಭಯ, ಆಕ್ರೋಶ ಮಾತ್ರ; ಪರಿಹಾರವಲ್ಲ : ಹಿಲರಿ ಕ್ಲಿಂಟನ್ ತಿರುಗೇಟು

ವಾಶಿಂಗ್ಟನ್, ಜು. 23: ರಿಪಬ್ಲಿಕನ್ ಪಕ್ಷದ ಕ್ಲೀವ್‌ಲ್ಯಾಂಡ್ ಸಮಾವೇಶದಲ್ಲಿ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮಾಡಿರುವ ಭಾಷಣ ‘‘ಕರಾಳ ಹಾಗೂ ವಿಭಜನವಾದಿ ಮುನ್ನೋಟ’’ವನ್ನು ಹೊಂದಿದೆ ಎಂದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಹೇಳಿದ್ದಾರೆ.
ರಿಪಬ್ಲಿಕನ್ ಅಭ್ಯರ್ಥಿ ಸಾಕಷ್ಟು ಭಯ ಹಾಗೂ ಆಕ್ರೋಶವನ್ನು ಹುಟ್ಟುಹಾಕಿದ್ದಾರೆ, ಆದರೆ ತಾನು ಪ್ರಸ್ತಾಪಿಸಿದ ವಿಷಯಗಳಿಗೆ ಯಾವುದೇ ಪರಿಹಾರವನ್ನು ನೀಡಿಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.
‘‘ಡೊನಾಲ್ಡ್ ಟ್ರಂಪ್‌ರ ಕರಾಳ ಹಾಗೂ ವಿಭಜನವಾದಿ ಮುನ್ನೋಟವನ್ನು ನಾನು ಕೇಳಿದ್ದೇನೆ. ನಿನ್ನೆ ರಾತ್ರಿಯ ಅವರ ಭಾಷಣ ಅದನ್ನು ಇನ್ನೊಂದು ಮಟ್ಟಕ್ಕೆ ಒಯ್ದಿದೆ. ಅವರು ಸಾಕಷ್ಟು ಭಯ, ಆಕ್ರೋಶ ಮತ್ತು ಅತೃಪ್ತಿಯನ್ನು ಹುಟ್ಟುಹಾಕಿದ್ದಾರೆ. ಆದರೆ, ತಾನು ಪ್ರಸ್ತಾಪಿಸಿದ ಯಾವುದೇ ವಿಷಯಗಳಿಗೆ ಅವರು ಯಾವುದೇ ಪರಿಹಾರವನ್ನು ಸೂಚಿಸಿಲ್ಲ’’ ಎಂದು ಫ್ಲೋರಿಡದ ಟ್ಯಾಂಪದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಹಿಲರಿ ಹೇಳಿದರು.
ಕ್ಲೀವ್‌ಲ್ಯಾಂಡ್‌ನಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಸಮಾವೇಶದ ವೇಳೆ ಗುರುವಾರ ರಾತ್ರಿ ಮಾಡಿದ ಭಾಷಣದಲ್ಲಿ ಅಮೆರಿಕದ ಭವಿಷ್ಯದ ಬಗ್ಗೆ ಟ್ರಂಪ್ ಮುಂದಿಟ್ಟ ‘‘ಕರಾಳ ಹಾಗೂ ವಿಭಜನವಾದಿ’’ ಮುನ್ನೋಟವನ್ನು ತಿರಸ್ಕರಿಸುವಂತೆ ಹಿಲರಿ ಅಮೆರಿಕನ್ನರಿಗೆ ಕರೆ ನೀಡಿದರು.





