ಉಪ್ಪಿನಂಗಡಿ: ನಾಲ್ಕನೆ ದಿನ ಪೂರೈಸಿದ ಹಿರೇಬಂಡಾಡಿ ಶಾಲಾ ಮಕ್ಕಳ-ಪೋಷಕರ ಧರಣಿ
.jpg)
ಉಪ್ಪಿನಂಗಡಿ, ಜು.23: ಹೆಚ್ಚುವರಿ ಶಿಕ್ಷಕರ ವರ್ಗಾವಣೆ ನೀತಿಯಿಂದಾಗಿ ಹಿರೇಬಂಡಾಡಿ ಸರಕಾರಿ ಮಾದರಿ ಹಿ ಪ್ರಾ. ಶಾಲೆಯಿಂದ ಇಬ್ಬರು ಶಿಕ್ಷಕರನ್ನು ವರ್ಗಾಯಿಸಿರುವುದನ್ನು ಪ್ರತಿಭಟಿಸಿ ಮಕ್ಕಳನ್ನು ಶಾಲೆಗೆ ಕಳುಹಿಸದಿರುವ ಪೋಷಕರ ಪ್ರತಿಭಟನೆ ನಾಲ್ಕನೆ ದಿನವಾದ ಶನಿವಾರವೂ ಮುಂದುವರೆದಿದ್ದು, ವರ್ಗಾವಣೆಗೊಂಡ ವಿಜ್ಞಾನ ಶಿಕ್ಷಕರ ಸ್ಥಾನಕ್ಕೆ ಬದಲಿ ವಿಜ್ಞಾನ ಶಿಕ್ಷಕರು ಆಗಮಿಸುವವರೆಗೆ ಬಿಡುಗಡೆಗೊಳಿಸುವುದಿಲ್ಲ ಎಂಬ ಶಿಕ್ಷಣ ಇಲಾಖಾಧಿಕಾರಿಗಳ ಭರವಸೆಗೆ ತೃಪ್ತರಾದ ಪೋಷಕರು ಸೋಮವಾರದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪಿಗೆ ಸೂಚಿಸಿದ ಘಟನೆ ಶನಿವಾರ ನಡೆದ ಪೋಷಕರ ಸಭೆಯಲ್ಲಿ ನಡೆದಿದೆ.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಮಕೃಷ್ಣರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿಕ್ಷಣ ಸಂಯೋಜಕ ಕುಕ್ಕ ಹಾಗೂ ಸಿಆರ್‌ಪಿ ಅನಂತ , ಶಾಲಾ ಪೋಷಕರ ಆಶಯದಂತೆ ಶಾಲೆಯ ವಿಜ್ಞಾನ ಶಿಕ್ಷಕರ ಅಗತ್ಯತೆಯನ್ನು ಇಲಾಖೆ ಮನಗಂಡಿದ್ದು, ವಿಜ್ಞಾನ ಶಿಕ್ಷಕ ಹುದ್ದೆಯನ್ನು ಕಡಿತಗೊಳಿಸಲಾಗಿಲ್ಲ. ಪ್ರಸಕ್ತ ವಿಜ್ಞಾನ ಶಿಕ್ಷಕರಾಗಿರುವವರನ್ನು ದೀರ್ಘಾವಧಿ ಸೇವೆಯ ನೆಲೆಯಲ್ಲಿ ಬೇರೆ ಶಾಲೆಗೆ ವರ್ಗಾಯಿಸಲಾಗಿದ್ದು, ಈ ಶಾಲೆಗೆ ವಿಜ್ಞಾನ ಶಿಕ್ಷಕರಾಗಿ ಬದಲಿ ಶಿಕ್ಷಕರನ್ನು ನೀಡಲಾಗುವುದು. ಪೋಷಕರ ಅಪೇಕ್ಷೆಯಂತೆ ಬದಲಿ ಶಿಕ್ಷಕರು ಆಗಮಿಸುವವರೆಗೆ ಇಲ್ಲಿನ ವರ್ಗಾವಣೆಗೊಂಡ ಶಿಕ್ಷಕರನ್ನು ಬಿಡುಗಡೆಗೊಳಿಸಲಾಗುವುದಿಲ್ಲ. ವಿದ್ಯಾರ್ಥಿಗಳ ಹಿತವನ್ನು ಇಲಾಖೆ ಹೆಚ್ಚಿನ ಕಾಳಜಿಯಿಂದ ಕಾಪಾಡುತ್ತದೆ ಎಂದು ವಿವರಿಸಿದರು.
ಈ ಬಗ್ಗೆ ಪಂಚಾಯತ್ ಅಧ್ಯಕ ್ಷಹಮ್ಮಬ್ಬ ಶೌಕತ್ ಅಲಿ ಪೋಷಕರ ನಿಲುವೇನೆಂದು ಪ್ರಶ್ನಿಸಿದಾಗ, ಬದಲಿ ವಿಜ್ಞಾನ ಶಿಕ್ಷಕರನ್ನು ಒದಗಿಸುವುದಿದ್ದಲ್ಲಿ ಮುಂದಿನ ಸೋಮವಾರದಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವುದಾಗಿ ಪೋಷಕರು ಒಕ್ಕೊರಲಿನಿಂದ ಘೋಷಿಸಿದರು.
ಒಂದಿಬ್ಬರು ಪೋಷಕರು ಇಬ್ಬರೂ ಶಿಕ್ಷಕರನ್ನು ಉಳಿಸಿಕೊಳ್ಳಬೇಕೆಂದು ಆಗ್ರಹಿಸಿದರೂ, ಸರಕಾರದ ನಿಯಮವನ್ನು ಪಾಲಿಸುವಲ್ಲಿ ಹಿರೇಬಂಡಾಡಿ ಶಾಲೆ ಅತೀತ ಎನ್ನುವಂತಿಲ್ಲ. ಇಬ್ಬರು ಶಿಕ್ಷಕರಲ್ಲಿ ಒಬ್ಬರು ಆದೇಶ ಬಂದಾಕ್ಷಣ ನಿರ್ಗಮಿಸುತ್ತಾರೆ. ಇನ್ನೊಬ್ಬರು ವಿಜ್ಞಾನ ಶಿಕ್ಷಕರು ಬಂದ ಬಳಿಕ ಬಿಡುಗಡೆಗೊಳ್ಳುತ್ತಾರೆ ಎಂದು ಅಂತಿಮ ನಿರ್ಧಾರವನ್ನು ಪೋಷಕರಿಗೆ ಪಂಚಾಯತ್ ಅಧ್ಯಕ್ಷರು ತಿಳಿಸಿದರು.
ಸಭೆಯಲ್ಲಿ ಪಿಡಿಒ ತಿರುಪತಿ, ತಾ.ಪಂ.ಸದಸ್ಯ ಮುಕುಂದ, ಪಂ. ಸದಸ್ಯ ಪ್ರಕಾಶ್‌ರೈ ಬೆಳ್ಳಿಪ್ಪಾಡಿ, ಮುಖ್ಯೋಪಾಧ್ಯಾಯ ಬಾಬು ಸೇರಿದಂತೆ ಊರಿನ ಗಣ್ಯರು, ಪೋಷಕರು ಭಾಗವಹಿಸಿದ್ದರು. ಮಕ್ಕಳನ್ನು ಕಳುಹಿಸದಿರುವ ಪ್ರತಿಭಟನೆ ನಾಲ್ಕನೆ ದಿನಕ್ಕೆ ಕಾಲಿಟ್ಟರೂ, ಶಾಲೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾಗಿ ಶನಿವಾರ ನಾಲ್ಕು ಮಕ್ಕಳು ಶಾಲೆಗೆ ಹಾಜರಾದರು. ಗುರುವಾರ ಓರ್ವ ವಿದ್ಯಾರ್ಥಿ ಮಾತ್ರ ಹಾಜರಾಗಿದ್ದರೆ, ಶುಕ್ರವಾರ ಇಬ್ಬರು ವಿದ್ಯಾರ್ಥಿಗಳು ಹಾಜರಾಗಿದ್ದರು. ಶನಿವಾರ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ನಾಲ್ಕಕ್ಕೇರಿದ್ದರೂ ಅವರೆಲ್ಲರೂ ತಮ್ಮ ತಮ್ಮ ಪೋಷಕರೊಡನೆ ಪೊಷಕರ ಸಭೆಯಲ್ಲಿ ಭಾಗವಹಿಸಿದ್ದರು.







