ಶಿವಮೊಗ್ಗ: ನಕಲಿ ಲೋಕಾಯುಕ್ತ ಎಸ್ಪಿಯಿಂದ ಭಾರೀ ವಂಚನೆ
ಮನೆ-ಕಚೇರಿಯ ಮೇಲೆ ದಾಳಿ ನಡೆಸುವ ಬೆದರಿಕೆಯೊಡ್ಡಿ ಹಣ ವಸೂಲಿ
.jpg)
ಶಿವಮೊಗ್ಗ, ಜು. 23: ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂದು ಹೇಳಿಕೊಂಡು ಅಪರಿಚಿತ ವಂಚಕನೋರ್ವ ರಾಜ್ಯದ ವಿವಿಧೆಡೆ ಅಧಿಕಾರಿಗಳ ಮೊಬೈಲ್‌ಗಳಿಗೆ ಕರೆ ಮಾಡಿ, ಭ್ರಷ್ಟಾಚಾರದ ಆರೋಪದ ಮೇರೆಗೆ ನಿಮ್ಮ ಮನೆ-ಕಚೇರಿ ಮೇಲೆ ದಾಳಿ ನಡೆಸುತ್ತೇನೆ ಎಂದು ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆಯಿಡುತ್ತಿದ್ದ ವಿಷಯ ಬೆಳಕಿಗೆ ಬಂದಿದೆ.
ಇದೇ ರೀತಿ ವಂಚಕ ಶಿವಮೊಗ್ಗ ನಗರದ ಅಧಿಕಾರಿಯೋರ್ವರಿಗೆ ಬೆದರಿಕೆ ಹಾಕಿದ್ದ. ಅಧಿಕಾರಿ ವಂಚಕನ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಇನ್‌ಸ್ಪೆೆಕ್ಟರ್ ಕೆ.ಟಿ.ಗುರುರಾಜ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಪೊಲೀಸರ ಪ್ರಾಥಮಿಕ ಹಂತದ ತನಿಖೆಯ ವೇಳೆ ಆರೋಪಿಯು ಭಾರೀ ಸಂಖ್ಯೆಯಲ್ಲಿ ಅಧಿಕಾರಿಗಳಿಂದ ಹಣ ವಸೂಲಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಇದು ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ ಎನ್ನಲಾಗಿದೆ. ಬರೀ ಮೊಬೈಲ್ ಪೋನ್ ಮೂಲಕವೇ ಅಧಿಕಾರಿಗಳಿಗೆ ಕರೆ ಮಾಡಿ ದಾಳಿ ನಡೆಸುವ ಬೆದರಿಕೆ ಹಾಕಿ, ಅವರಿಂದ ಬ್ಯಾಂಕ್ ಖಾತೆಗಳಿಗೆ ವಂಚಕ ಹಣ ವರ್ಗಾಯಿಸಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.
ವಂಚಕ ಚಹರೆ, ಊರು, ಆತನ ಸಹಚರರ ಬಗ್ಗೆ ವಿವರಗಳು ಪೊಲೀಸರಿಗೆ ಲಭ್ಯವಾಗಿಲ್ಲ. ಮೊಬೈಲ್ ಸಿಮ್ ಕಾರ್ಡ್, ಬ್ಯಾಂಕ್ ಖಾತೆಯ ಆಧಾರದ ಮೇಲೆ ವಿಳಾಸ ಸಂಗ್ರಹಿಸಿ ದಾಳಿ ನಡೆಸಿದ ಪೊಲೀಸ್ ತಂಡ ಮಾಹಿತಿ ಕಲೆ ಹಾಕಿ ಹಿಂದಿರುಗಿದೆ. ಆದರೆ, ಎಲ್ಲಿಯೂ ವಂಚಕನ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ದಾಖಲಾದ ದೂರು
ಜು.13 ರಂದು ಸಂಜೆ 7 ಗಂಟೆಗೆ ಶಿವಮೊಗ್ಗ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮೂಕಪ್ಪಗೌಡರವರ ಮೊಬೈಲ್‌ಗೆ ಕರೆಯೊಂದು ಬಂದಿದೆ. ಅಪರಿಚಿತ ವ್ಯಕ್ತಿ ತಾನು ಲೋಕಾಯುಕ್ತ ಎಸ್ಪಿ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ನಿಮ್ಮ ಮೇಲೆ ದೂರುಗಳು ಬಂದಿವೆ. ನಿಮ್ಮ ಮನೆ ಮೇಲೆ ರೈಡ್ ಮಾಡುತ್ತೇನೆ. ರೈಡ್ ಮಾಡಬಾರದೆಂದರೆ 50 ಸಾವಿರ ರೂ. ನೀಡಬೇಕು ಎಂದು ಬೆದರಿಕೆ ಹಾಕಿರುವುದಾಗಿ ಮೂಕಪ್ಪಗೌಡ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ, ಜು.14ರಂದು ಮೂಕಪ್ಪಗೌಡರ ಮೊಬೈಲ್‌ಗೆ ಬ್ಯಾಂಕ್ ಖಾತೆಯ ಸಂದೇಶವೊಂದನ್ನು ವಂಚಕ ಕಳುಹಿಸಿದ್ದಾನೆ. ಹುಬ್ಬಳ್ಳಿ ವಿದ್ಯಾನಗರ ಬಡಾವಣೆಯಲ್ಲಿರುವ ಬ್ಯಾಂಕ್‌ವೊಂದರ ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್, ಪಾನ್ ನಂಬರ್, ಬ್ಯಾಂಕ್ ಖಾತೆದಾರರ ಹೆಸರು ರವಾನಿಸಿದ್ದಾನೆ. ಈ ಖಾತೆಗೆ ಹಣ ಜಮಾ ಮಾಡುವಂತೆ ಸೂಚಿಸಿದ್ದಾನೆ. ನಂತರದಲ್ಲಿ ಮೂಕಪ್ಪಗೌಡರ ಮೊಬೈಲ್‌ಗೆ ಮತ್ತೆ ಕರೆ ಮಾಡಿದ ವಂಚಕ ಹೊಸಳ್ಳಿ ಗ್ರಾಮದ ಮಸೀದಿ ಹತ್ತಿರ ಆಗಮಿಸಿ ನಗದು ರೂಪದಲ್ಲಿ ನೀಡುವಂತೆ ಸೂಚಿಸಿದ್ದಾನೆ. ಸತ್ಯಾಸತ್ಯತೆ ಅರಿಯಲು ಮೂಕಪ್ಪಗೌಡರು ಆರೋಪಿ ತಿಳಿಸಿದ ಸ್ಥಳಕ್ಕೆ ತೆರಳಿದ್ದಾರೆ. ಆದರೆ ಆರೋಪಿ ಸ್ಥಳಕ್ಕೆ ಆಗಮಿಸಿಲ್ಲ. ಬಳಿಕ ಮೂಕಪ್ಪಅವರ ಮೊಬೈಲ್‌ಗೆ ಕರೆ ಮಾಡಿ ಎಡಿಜಿಪಿ ಗಗನ್ ದೀಪ್‌ರವರ ಮೀಟಿಂಗ್‌ನಲ್ಲಿದ್ದು, ಮತ್ತೆ ಸಿಗುವುದಾಗಿ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.
ಅಲ್ಲದೆ, ಐದು ಗ್ರಾಮ ಪಂಚಾಯತ್‌ಗಳಿಗೆ ತೆರಳಿ ಮಾಹಿತಿ ಕಲೆ ಹಾಕಿ, ಅಲ್ಲಿರುವ ಎಲ್ಲ ಆರೋಪಗಳಿಂದ ನಿಮ್ಮನ್ನು ಮುಕ್ತಗೊಳಿಸುತ್ತೇನೆ. ನಿಮ್ಮ ಕಚೇರಿ ಹಾಗೂ ಮನೆಯ ಮೇಲೆ ದಾಳಿ ಮಾಡದೆ ಅನುಕೂಲ ಮಾಡಿಕೊಡುವುದಾಗಿ ಕರೆಯಲ್ಲಿ ತಿಳಿಸಿದ್ದಾನೆ ಎಂದು ಮೂಕಪ್ಪ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಹಲವು ಅಧಿಕಾರಿಗಳಿಂದ ಹಣ ವಸೂಲಿ...?
ಆರೋಪಿ ನಿರ್ದಿಷ್ಟ ಸಂಖ್ಯೆಯ ಮೊಬೈಲ್ ನಂಬರ್ ಬಳಸಿ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಸಂಗತಿ ಪೊಲೀಸರ ಪ್ರಾಥಮಿಕ ಹಂತದ ತನಿಖೆಯ ವೇಳೆ ಗಮನಕ್ಕೆ ಬಂದಿದೆ. ಈ ನಂಬರ್‌ನಿಂದ ಅಧಿಕಾರಿಗಳ ಮೊಬೈಲ್‌ಗಳಿಗೆ ಮಾತ್ರ ಕರೆ ಮಾಡಲು ಬಳಸುತ್ತಿದ್ದ ಎನ್ನಲಾಗಿದೆ. ಉಳಿದಂತೆ ಇತರ ಯಾವುದೇ ಮೊಬೈಲ್‌ಗಳಿಗೆ ಕರೆ ಅಥವಾ ಮೆಸೇಜ್ ಕಳುಹಿಸಿಲ್ಲ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ಆರೋಪಿ ಬಳಸುತ್ತಿದ್ದ ಮೊಬೈಲ್ ಸಂಖ್ಯೆಯ ಹೊರ ಹೋಗುವ ಹಾಗೂ ಒಳ ಬರುವ ಕರೆಗಳ ಸಮಗ್ರ ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆಸಿದಾಗ ಆರೋಪಿ ಕರೆ ಮಾಡಿರುವುದೆಲ್ಲ ಅಧಿಕಾರಿಗಳ ವೊಬೈಲ್ ಸಂಖ್ಯೆಯೇ ಆಗಿದೆ. ಹಾಗೆಯೇ ಆತನಿಗೆ ಕರೆ ಮಾಡಿರುವುದು ಕೂಡ ಅಧಿಕಾರಿಗಳೇ ಆಗಿದ್ದಾರೆ ಎಂದು ಹೇಳಲಾಗಿದೆ.
ಹಿರಿಯ ಅಧಿಕಾರಿಗಳಿಗೂ ಬ್ಲ್ಯಾಕ್‌ಮೇಲ್!
ಆರೋಪಿ ಹಿರಿಯ ಅಧಿಕಾರಿಗಳು ಸೇರಿದಂತೆ ಕೆಳಹಂತದ ಹಲವು ಅಧಿಕಾರಿಗಳನ್ನು ತನ್ನ ಬಲೆಗೆ ಕೆಡವಿರುವುದಾಗಿ ತಿಳಿದು ಬಂದಿದ್ದು, ಈತನ ಮಾತು ನಂಬಿದ ಹಲವು ಅಧಿಕಾರಿಗಳು ಲೋಕಾಯುಕ್ತ ದಾಳಿ ನಡೆಸುವ ಭಯದಿಂದ ಆತ ಕಳುಹಿಸುತ್ತಿದ್ದ ಬ್ಯಾಂಕ್ ಖಾತೆಗೆ ಹಣ ಕೂಡ ಜಮೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾರ್ಯಪಾಲಕ ಅಭಿಯಂತರ, ಸಹಾಯಕ - ಕಿರಿಯ ಕಾರ್ಯಪಾಲಕ ಅಭಿಯಂತರರು, ತಾಲೂಕು ಪಂಚಾಯತ್ ಇಒಗಳು, ಪಿಡಬ್ಲ್ಯೂಡಿ, ರೆವಿನ್ಯೂ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳ ಮೊಬೈಲ್‌ಗಳಿಗೆ ಕರೆ ಮಾಡಿರುವ ಆರೋಪಿ ಲೋಕಾಯುಕ್ತ ಎಸ್ಪಿ ಎಂದು ಹೇಳಿಕೊಂಡು ಹಣಕ್ಕೆ ಬೇಡಿಕೆ ಇಟ್ಟದ್ದ ಎಂಬ ಸಂಗತಿ ಬಹಿರಂಗವಾಗಿದೆ. ಅಲ್ಲದೆ, ಈತ ಕರೆಮಾಡಿರುವ ಅಧಿಕಾರಿಗಳು, ಹಣ ನೀಡಿರುವ ಅಧಿಕಾರಿಗಳ ಬಗ್ಗೆ ಪೊಲೀಸರು ಮಾಹಿತಿ ಹೊರಬಿಟ್ಟಿಲ್ಲ.
ಅಸಲಿ-ನಕಲಿಗಳ ನಡುವೆ ಅಧಿಕಾರಿಗಳು ತತ್ತರ
ಇತ್ತೀಚೆಗೆ ಲೋಕಾಯುಕ್ತ ನ್ಯಾಯಮೂರ್ತಿ ಪುತ್ರ, ಲೋಕಾಯುಕ್ತ ಕಚೇರಿಯ ಕೆಲ ಅಧಿಕಾರಿಗಳು ಹಾಗೂ ಇತರರು ಸೇರಿಕೊಂಡು ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಸಂಗತಿ ಬೆಳಕಿಗೆ ಬಂದಿತ್ತು. ಮತ್ತೊಂದೆಡೆ ನಕಲಿಗಳು ಕೂಡ ಲೋಕಾಯುಕ್ತ ಎಸ್ಪಿ, ಡಿವೈಎಸ್ಪಿ ಎಂಬಿತ್ಯಾದಿಯಾಗಿ ಹೇಳಿಕೊಂಡು ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಅಸಲಿ - ನಕಲಿ ಲೋಕಾಯುಕ್ತರ ಕಾಟಕ್ಕೆ ಸಿಲುಕಿರುವ ರಾಜ್ಯದ ಅಧಿಕಾರಿಗಳು ತತ್ತರಿಸಿ ಹೋಗಿದ್ದಾರೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿಯೋರ್ವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಸಿಇಒಗೂ ಬಂದಿತ್ತು ವಂಚಕನ ಕರೆ
ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಐಎಎಸ್ ದರ್ಜೆಯ ಅಧಿಕಾರಿಯಾದ ಕೆ.ರಾಕೇಶ್ ಕುಮಾರ್‌ರ ಮೊಬೈಲ್‌ಗೂ ವಂಚಕ ಕರೆ ಮಾಡಿದ್ದ ವಿಷಯ ಬೆಳಕಿಗೆ ಬಂದಿದೆ. ಸಿಇಒರ ಮೊಬೈಲ್‌ಗೆ ಇತ್ತೀಚೆಗೆ ಕರೆ ಮಾಡಿದ್ದ ವಂಚಕ ಲೋಕಾಯುಕ್ತ ಎಸ್ಪಿ ಎಂದು ಹೇಳಿ ಕೊಂಡಿದ್ದಾನೆ. ನಿಮ್ಮ ಕೆಳಹಂತದ ಅಧಿಕಾರಿಗಳ ವಿರುದ್ಧ ಸಾಕಷ್ಟು ಭ್ರಷ್ಟಾಚಾರದ ಆರೋಪಗಳಿವೆ. ಅವರಿಗೆ ತನಗೆ ಪೋನ್ ಮಾಡಲು ಹೇಳಿ. ಇಲ್ಲದಿದ್ದರೆ ಅವರ ಮನೆ-ಕಚೇರಿಗಳ ಮೇಲೆ ದಾಳಿ ನಡೆಸುವುತ್ತೇನೆ ಎಂದು ತಿಳಿಸಿದ್ದ ಎನ್ನಲಾಗಿದೆ.
ವಂಚಕನ ಈ ಮಾತಿಗೆ ಮಣೆ ಹಾಕದ ಕೆ. ರಾಕೇಶ್ ಕುಮಾರ್, ಅಧಿಕಾರಿಗಳ ಮೇಲೆ ಏನಾದರೂ ದೂರುಗಳಿದ್ದರೆ ತಮ್ಮ ಕಚೇರಿಗೆ ಆಗಮಿಸಿ ಮಾಹಿತಿ ನೀಡಿ ಎಂದು ಪ್ರತ್ಯುತ್ತರ ನೀಡಿದ್ದರು ಎನ್ನಲಾಗಿದೆ. ಸಿಇಒರವರ ಈ ನೇರ ಮಾತುಗಳಿಂದ ಬೆದರಿದ್ದ ವಂಚಕ ಮತ್ತೆ ಅವರ ಮೊಬೈಲ್‌ಗೆ ಕರೆ ಮಾಡಿರಲಿಲ್ಲ ಎನ್ನಲಾಗಿದೆ.
ಈ ಕುರಿತಂತೆ ಶನಿವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಸಿಇಒ ಕೆ. ರಾಕೇಶ್‌ಕುಮಾರ್, ಲೋಕಾಯುಕ್ತ ಪೊಲೀಸ್ ಅಧಿಕಾರಿ ಎಂದು ಓರ್ವ ತಮ್ಮ ಮೊಬೈಲ್‌ಗೆ ಕರೆ ಮಾಡಿದ್ದರು. ಕೆಲ ಅಧಿಕಾರಿಗಳು ಅವ್ಯವಹಾರ ನಡೆಸಿದ ದೂರುಗಳು ಬಂದಿವೆ. ಸಂಬಂಧಿಸಿದವರಿಗೆ ತಮ್ಮನ್ನು ಸಂಪರ್ಕಿಸಲು ಹೇಳಿ ಎಂದಿದ್ದರು.
ಆದರೆ ಇದರ ಬಗ್ಗೆ ಅನುಮಾನಗೊಂಡ ತಾವು ನೇರವಾಗಿ ತಮ್ಮ ಕಚೇರಿಗೆ ಆಗಮಿಸಿ ಮಾಹಿತಿ ನೀಡುವಂತೆ ಸೂಚಿಸಿದ್ದೆ. ತದನಂತರ ಆ ವ್ಯಕ್ತಿ ತಮಗೆ ಕರೆ ಮಾಡಿರಲಿಲ್ಲ. ಇದೀಗ ಕರೆ ಮಾಡಿದ್ದ ವ್ಯಕ್ತಿ ನಕಲಿ ಲೋಕಾಯುಕ್ತ ಅಧಿಕಾರಿ ಎಂಬುವುದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂದು ಹೇಳಿಕೊಂಡು ಅಧಿಕಾರಿಯೋರ್ವರಿಗೆ ಹಣದ ಬೇಡಿಕೆ ಇಟ್ಟದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಆರೋಪಿ ಎಷ್ಟು ಅಧಿಕಾರಿಗಳಿಗೆ ವಂಚಿಸಿದ್ದಾನೆ ಎಂಬತ್ಯಾದಿ ವಿವರಗಳ ತನಿಖೆ ನಡೆಸಲಾಗುತ್ತಿದೆ. ಆರೋಪಿಯ ಪತ್ತೆಗೆ ಕ್ರಮಕೈಗೊಳ್ಳಲಾಗಿದ್ದು, ವಿವಿಧೆಡೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಂಧನದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.
ರವಿ ಡಿ. ಚೆನ್ನಣ್ಣನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ







