ಕೊಳವೆಬಾವಿಯಲ್ಲಿ ಬಿದ್ದಿದ್ದ ಮೂರರ ಹರೆಯದ ಬಾಲಕ ‘ರಕ್ಷಣೆ ’ ಬಳಿಕ ಮೃತ್ಯುವಶ

ಗ್ವಾಲಿಯರ್,ಜು.23: ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ದಾಬ್ರಾ ಬ್ಲಾಕ್‌ನ ಖೇರಿಗಾಂವ್ ಗ್ರಾಮದಲ್ಲಿ ಕೊಳವೆಬಾವಿಯಲ್ಲಿ ಬಿದ್ದಿದ್ದ ಬಾಲಕನನ್ನು ಶನಿವಾರ ಮಧ್ಯಾಹ್ನ ಹೊರಗೆ ತೆಗೆಯಲಾಗಿದೆ. ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು.
ಶುಕ್ರವಾರ ಸಂಜೆ ತನ್ನ ತಂದೆಯ ಹೊಲದಲ್ಲಿ ಆಟವಾಡುತ್ತಿದ್ದ ಅಭಿ ಪಚೋರಿ ಕಾಲು ಜಾರಿ 28 ಅಡಿ ಆಳದ ಕೊಳವೆಬಾವಿಯಲ್ಲಿ ಬಿದ್ದಿದ್ದ ಮತ್ತು ಆಗಿನಿಂದ ಆತನಲ್ಲಿ ಯಾವುದೇ ಚಲನೆ ಕಂಡು ಬಂದಿರಲಿಲ್ಲ. ಮಾಹಿತಿ ತಿಳಿದಾಕ್ಷಣ ಅಧಿಕಾರಿಗಳು ರಕ್ಷಣಾ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದ್ದರು. ವೀಡಿಯೊ ಕ್ಯಾಮರಾದ ಮೂಲಕ ನೋಡಿದಾಗ ಬಾಲಕನಲ್ಲಿ ಯಾವುದೇ ಚಲನೆಯಿರಲಿಲ್ಲ ಮತ್ತು ಆತನ ಬಳಿಯಲ್ಲಿಯೇ ಹಲವಾರು ಅಡಿಗಳುದ್ದದ ಹಾವು ಹರಿದಾಡುತ್ತಿದ್ದ ದೃಶ್ಯ ಕಂಡು ಬಂದಿತ್ತು. ಇದು ರಕ್ಷಣಾ ತಂಡವನ್ನು ಕಳವಳಕ್ಕೀಡು ಮಾಡಿತ್ತು.
ಕಳೆದೊಂದು ವರ್ಷದಲ್ಲಿ ಇದು ರಾಜ್ಯದಲ್ಲಿ ನಡೆದಿರುವ ಇಂತಹ ಮೂರನೇ ದುರಂತವಾಗಿದ್ದು,ಇಂತಹ ಬಿಕ್ಕಟ್ಟುಗಳನ್ನು ನಿಭಾಯಿಸುವ ಮತ್ತು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಸನ್ನದ್ಧತೆಯ ಬಗ್ಗೆ ಪ್ರಶ್ನೆಗಳನ್ನು ಸೃಷ್ಟಿಸಿದೆ.
ಕಳೆದ 12 ವರ್ಷಗಳಿಂದಲೂ ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಇಂತಹ ಘಟನೆಗಳು ಮರುಕಳಿಸದಂತೆ ಅದರ ಯೋಜನೆ ಏನಾಯಿತು ಎಂದು ಸ್ಥಳೀಯರು ಪ್ರಶ್ನಿಸಿದರು.





