ಕೊಪ್ಪದಲ್ಲಿ ದಲಿತರ ಮೇಲಿನ ಹಲ್ಲೆಗೆ ಎಸ್‌ಡಿಪಿಐ ಖಂಡನೆ

ಮಂಗಳೂರು, ಜು.23: ಚಿಕ್ಕಮಗಳೂರಿನ ಕೊಪ್ಪದಲ್ಲಿ ದಲಿತರ ಮನೆಯಲ್ಲಿ ಗೋಮಾಂಸ ಇದೆಯೆಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ದಲಿತರ ಮನೆಗೆ ನುಗ್ಗಿ ಮಾರಣಾಂತಿಕವಾಗಿ ನಡೆಸಿದ ಹಲ್ಲೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ. ಮತ್ತು ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಸಂಘಪರಿವಾರದ ಗೂಂಡಾಗಳು ದೇಶಾದ್ಯಂತ ಗೋವಿನ ಹೆಸರಿನಲ್ಲಿ ಮುಸ್ಲಿಮರ ಮೇಲೆ ನಿರಂತರ ಹಲ್ಲೆ ನಡೆಸುತ್ತಿದ್ದು ಇದೀಗ ದಲಿತರ ಮೇಲೂ ಗೋವಿನ ಹೆಸರಿನಲ್ಲಿ ದಾಳಿಗಳು ವ್ಯಾಪಕವಾಗಿ ನಡೆಯುತ್ತಿದೆ. ದೇಶಾದ್ಯಂತ ಅಲ್ಪಸಂಖ್ಯಾತರು ಮತ್ತು ದಲಿತರು ಭಯದಿಂದ ಜೀವನ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಅವರವರ ಅಚಾರ ವಿಚಾರಗಳನ್ನು ಅನುಸರಿಸುವ, ಅವರಿಗೆ ಬೇಕಾಗುವ ಆಹಾರವನ್ನು ತಿನ್ನುವ, ಅವಕಾಶವನ್ನು ಸಂವಿಧಾನವು ಕೊಟ್ಟಿದೆ.
ಆದರೆ ಫ್ಯಾಸಿಸ್ಟ್ ಶಕ್ತಿಗಳು ನಿರಂತರವಾಗಿ ಸಂವಿಧಾನ ವಿರೋಧಿ ದಾಳಿಗಳು ನಡೆಸುತ್ತಿರುವಾಗ ಇದನ್ನು ತಡೆಯಬೇಕಾದ ಸರಕಾರಗಳು ಮೂಕಪ್ರೇಕ್ಷಕರಾಗಿ ನಿಂತಿರುವುದು ವಿಪರ್ಯಾಸವಾಗಿದೆ. ಆದುದರಿಂದ ದೇಶದ ಅಖಂಡತೆಯನ್ನು ಕಾಪಾಡಲು ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಧ್ವನಿಯೆತ್ತಲು ಜ್ಯಾತ್ಯಾತೀತ ಶಕ್ತಿಗಳು ಒಂದಾಗಬೇಕಾಗಿದೆ ಎಂದು ಎಸ್ಡಿಪಿಐ ದ.ಕ. ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





