ಜೆಡಿಎಸ್ ಶಾಸಕರ ವಿಚಾರಣೆ ಆ.23ಕ್ಕೆ ಮುಂದೂಡಿಕೆ
ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ
ಬೆಂಗಳೂರು, ಜು. 23: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಪಕ್ಷದಿಂದ ಅಮಾನತುಗೊಂಡಿರುವ ಜೆಡಿಎಸ್‌ನ 8ಮಂದಿ ಶಾಸಕರ ‘ಅನರ್ಹತೆ’ ಸಂಬಂಧ ದೂರುದಾರ ಶಾಸಕ ಬಿ.ಬಿ.ನಿಂಗಯ್ಯರ ವಾದವನ್ನು ಸ್ಪೀಕರ್ ಕೆ.ಬಿ. ಕೋಳಿವಾಡ ಆಲಿಸಿದ್ದು, ಮುಂದಿನ ವಿಚಾರಣೆಯನ್ನು ಆ.23ಕ್ಕೆ ಮುಂದೂಡಿದ್ದಾರೆ.
ಶನಿವಾರ ವಿಧಾನಸೌಧದಲ್ಲಿನ ಸ್ಪೀಕರ್ ಕೊಠಡಿಗೆ ವಕೀಲ ನಿಶಾಂತ ಅವರೊಂದಿಗೆ ಆಗಮಿಸಿದ ಶಾಸಕ ನಿಂಗಯ್ಯ, ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಪಕ್ಷದ ವಿಪ್ ಉಲ್ಲಂಘಿಸಿದ ಎಂಟು ಮಂದಿ ಶಾಸಕರ ಸದಸ್ಯತ್ವ ರದ್ದುಗೊಳಿಸಬೇಕು. ಇವರೆಲ್ಲರೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ದೂರಿದರು.
ಜೆಡಿಎಸ್ ಚಿಹ್ನೆಯಡಿಯಲ್ಲಿ ಆಯ್ಕೆಯಾಗಿ ನಮ್ಮ ಪಕ್ಷದ ಸದಸ್ಯರಾಗಿದ್ದು, ರಾಜ್ಯಸಭೆ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿ ಬೇರೆ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ. ಆದುದರಿಂದ ಎಂಟು ಮಂದಿ ಶಾಸಕರ ಸದಸ್ಯತ್ವ ರದ್ದುಗೊಳಿಸಬೇಕೆಂದು ನಿಂಗಯ್ಯ ಪರ ವಕೀಲರು ವಾದ ಮಂಡಿಸಿದರು.
ರಾಜ್ಯ ಸರಕಾರದ ಭಾಗವಲ್ಲದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರೊಂದಿಗೆ ಸಮಾಲೋಚನೆ ನಡೆಸಿದ ಎಂಟು ಮಂದಿ ಶಾಸಕರು ಮಾಧ್ಯಮಗಳಿಗೆ ಹೇಳಿಕೆ ನೀಡಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಎಲ್ಲ ಮಾಧ್ಯಮಗಳಲ್ಲಿಯೂ ಸುದ್ದಿ ಬಿತ್ತರವಾಗಿದೆ.
ಆ ಹಿನ್ನೆಲೆಯಲ್ಲಿ ಶಾಸಕರ ಅನರ್ಹಗೊಳಿಸಲು ಅದೇ ಪ್ರಮುಖ ಸಾಕ್ಷಿ. ಈ ಸಂಬಂಧ ಈಗಾಗಲೇ ದಾಖಲೆಗಳು, ಸಿಡಿ ಮತ್ತು ಮಾಧ್ಯಮಗಳ ಹೇಳಿಕೆಗಳ ದಾಖಲೆಯನ್ನು ನೀಡಲಾಗಿದೆ. ಸುಪ್ರೀಂ ಕೋರ್ಟ್‌ನ ತೀರ್ಪೊಂದನ್ನು ಉಲ್ಲೇಖಿಸಿ ಎಂಟು ಮಂದಿಯನ್ನು ಅನರ್ಹಗೊಳಿಸಿ ಎಂದು ಕೋರಿದರು.
ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ನಿಂಗಯ್ಯ, ಪಕ್ಷದಿಂದ ಅಮಾನತುಗೊಂಡ ಝಮೀರ್ ಅಹ್ಮದ್ ಖಾನ್, ಇಕ್ಬಾಲ್ ಅನ್ಸಾರಿ, ಬಾಲಕೃಷ್ಣ, ಚಲುವರಾಯಸ್ವಾಮಿ, ಗೋಪಾಲಯ್ಯ, ರಮೇಶ್ ಬಂಡಿಸಿದ್ದೇಗೌಡ, ಅಖಂಡ ಶ್ರೀನಿವಾಸಮೂರ್ತಿ, ಭೀಮಾನಾಯ್ಕಾರನ್ನು ಅನರ್ಹಗೊಳಿಸಲು ವಾದ ಮಂಡಿಸಲಾಗಿದೆ ಎಂದು ತಿಳಿಸಿದರು.
ದೂರುದಾರರ ವಾದವನ್ನು ಆಲಿಸಿದ್ದು, ಜೆಡಿಎಸ್‌ನಿಂದ ಅಮಾನತುಗೊಂಡ ಎಂಟು ಮಂದಿ ಶಾಸಕರಿಗೆ ನೋಟಿಸ್ ಜಾರಿ ಮಾಡಲು ಕೋರಿದ್ದಾರೆ. ಈ ಬಗ್ಗೆ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’
-ಕೆ.ಬಿ.ಕೋಳಿವಾಡ, ಸ್ಪೀಕರ್





