ಭಾರತೀಯ ರೈಲ್ವೆಗೆ ಆಧುನಿಕ ಸ್ಪರ್ಶ: ಸುರೇಶ್‌ಪ್ರಭು
ಯಶವಂತಪುರ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ

ಬೆಂಗಳೂರು, ಜು.23: ಭಾರತೀಯ ರೈಲ್ವೆಗೆ ತಂತ್ರಜ್ಞಾನ ಆಧಾರಿತವಾದ ಆಧುನಿಕ ಸ್ಪರ್ಶ ನೀಡಲು ಕೇಂದ್ರ ಸರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್‌ಪ್ರಭು ತಿಳಿಸಿದ್ದಾರೆ.
ಶನಿವಾರ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ನೂತನ ಪ್ರವೇಶದ್ವಾರ (ಪ್ಲಾಟ್ ಫಾರಂ-1), ಒಳಾಂಗಣ ಮತ್ತು ಹತ್ತುವ ಇಳಿಯುವ ಎಸ್ಕಲೇಟರ್‌ಗಳು, ಯಲಹಂಕ -ಚನ್ನಸಂದ್ರ ಮತ್ತು ಯಶವಂತಪುರ-ಯಲಹಂಕ ಸೆಕ್ಷನ್‌ಗಳ ವಿದ್ಯುದೀಕರಣ ಸಹಿತ ದ್ವಿಪಥೀಕರಣ ಹಾಗೂ ಯಲಹಂಕ-ಧರ್ಮಾವರಂ ಸೆಕ್ಷನ್‌ನ ವಿದ್ಯುದೀಕರಣ ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಿ ಅವರು ಮಾತನಾಡಿದರು.
ಪ್ರಮುಖ ನಗರಗಳ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಯೊಂದಿಗೆ ಹೊಸದಾಗಿ ಉಪನಗರ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ. ಪ್ರಾಯೋಗಿಕವಾಗಿ ಭೋಪಾಲ್‌ನ ಹಬೀಬ್‌ಗಂಜ್‌ನಲ್ಲಿ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಆ ನಂತರ, ಗುಜರಾತ್, ದಿಲ್ಲಿಯಲ್ಲಿ ತಲಾ ಎರಡು ಹಾಗೂ ಇನ್ನಿತರೆಡೆ ಎರಡು ಸೇರಿದಂತೆ ಒಟ್ಟು ಆರು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು.
ದೇಶದ ಜನತೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ವಿಚಾರದಲ್ಲಿ ಕೇಂದ್ರ ಸರಕಾರದೊಂದಿಗೆ ರಾಜ್ಯ ಸರಕಾರಗಳು ಕೈ ಜೋಡಿಸಬೇಕು. ರೈಲ್ವೆ ನಿಲ್ದಾಣಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಸಂಬಂಧ ಈಗಾಗಲೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು.
ಯಶವಂತಪುರ-ಯಲಹಂಕ, ಯಲಹಂಕ-ಚನ್ನಸಂದ್ರ ಸೆಕ್ಷನ್‌ಗಳ ವಿದ್ಯುದೀಕರಣ ಸಹಿತ ದ್ವಿಪಥೀಕರಣ ಮತ್ತು ಯಲಹಂಕ-ಧರ್ಮಾವರಂ ಸೆಕ್ಷನ್‌ಗಳ ವಿದ್ಯುದೀಕರಣಗಳ ಲೋಕಾರ್ಪಣೆಯಿಂದಾಗಿ ರಾಜ್ಯದ ಜನತೆಗೆ ಹೆಚ್ಚಿನ ಲಾಭವಾಗಲಿದೆ ಎಂದು ಅವರು ಹೇಳಿದರು.
ಮುಂದಿನ ಅಕ್ಟೋಬರ್ ತಿಂಗಳಲ್ಲಿ(ದಸರಾ ವೇಳೆಗೆ) ಯಾದಗಿರಿಯಲ್ಲಿ ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆಯನ್ನು ಲೋಕಾರ್ಪಣೆಗೊಳಿಸಲಾಗುವುದು. ಇದರಿಂದಾಗಿ, ಸುಮಾರು 3 ಸಾವಿರ ನೇರ ಉದ್ಯೋಗ ಸೃಷ್ಠಿಯಾಗಲಿದೆ ಎಂದು ಅವರು ಹೇಳಿದರು.
ರೈಲ್ವೆ ಬಜೆಟ್‌ನಲ್ಲಿ ರಾಜ್ಯದ ಪಾಲನ್ನು ನಮ್ಮ ಸರಕಾರವು ಶೇ.300ರಷ್ಟು ಹೆಚ್ಚಳ ಮಾಡಿದೆ. 2012-13ರಲ್ಲಿ 682 ಕೋಟಿ ರೂ.ಗಳಷ್ಟಿದ್ದ ರೈಲ್ವೆ ಬಜೆಟ್‌ನ್ನು 2016-17ನೆ ಸಾಲಿನಲ್ಲಿ 2,779 ಕೋಟಿ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಮುಂದಿನ ಸಾಲಿನಲ್ಲಿ ಈ ಪ್ರಮಾಣವು ಮತ್ತಷ್ಟು ಹೆಚ್ಚಾಗಲಿದೆ ಎಂದು ಸುರೇಶ್‌ಪ್ರಭು ಹೇಳಿದರು.
ವಿದ್ಯುತ್ ಖರೀದಿಯಲ್ಲಿ ರೈಲ್ವೆ ಇಲಾಖೆಯು ದೇಶದ ಅತೀದೊಡ್ಡ ಗ್ರಾಹಕವಾಗಿದೆ. ಇಲಾಖೆಯಲ್ಲಿ ಕೈಗೊಳ್ಳುತ್ತಿರುವ ಸುಧಾರಣೆ ಕ್ರಮಗಳಿಂದಾಗಿ ಸುಮಾರು 3,500 ಕೋಟಿ ರೂ.ವಿದ್ಯುತ್‌ಗೆ ಪಾವತಿಸುತ್ತಿದ್ದ ಮೊತ್ತವನ್ನು ನಾವು ಉಳಿಸಿದ್ದೇವೆ. ಅಲ್ಲದೆ, ರೈಲ್ವೆ ಲೇನ್‌ಗಳ ವಿದ್ಯುದೀಕರಣದ ಪ್ರಮಾಣ ಹೆಚ್ಚಳದಿಂದಾಗಿ ಡೀಸೆಲ್ ಬಳಕೆಯನ್ನು ಕ್ರಮೇಣ ಕಡಿಮೆಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ರೈಲ್ವೆ ಲೇನ್‌ಗಳ ದ್ವಿಪಥೀಕರಣ(ಡಬ್ಲಿಂಗ್) ಹಾಗೂ ತ್ರಿಪಥೀಕರಣ(ಟಿಪ್ಲಿಂಗ್)ಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, 1.21 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ರೈಲ್ವೆಯಲ್ಲಿ ಹೂಡಿಕೆಯನ್ನು ಆಕರ್ಷಿಸಲಾಗುತ್ತಿದೆ. ಮುಂಬೈ- ಅಹ್ಮದಾಬಾದ್ ನಡುವೆ 96 ಸಾವಿರ ಕೋಟಿ ರೂ.ವೆಚ್ಚದಲ್ಲಿ ಹೈಸ್ಪೀಡ್ ರೈಲು ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಸುರೇಶ್‌ಪ್ರಭು ಹೇಳಿದರು.
ಲು ಗುಂತಕ್ಕಲ್-ವಾಡಿ ನಡುವೆ 225 ಕಿ.ಮೀ. ಮಾರ್ಗವನ್ನು 6-8 ತಿಂಗಳಲ್ಲಿ ವಿದ್ಯುದೀಕರಣ ಮಾಡಲಾಗುವುದು. ಇದರಿಂದಾಗಿ ಕಲಬುರಗಿ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಿಗೆ ಅನುಕೂಲವಾಗುತ್ತದೆ. ಅಲ್ಲದೆ, ಮುಂಬೈ-ಬೆಂಗಳೂರುವರೆಗೆ ಸಂಪೂರ್ಣ ಮಾರ್ಗ ಕೆಲವೇ ತಿಂಗಳಲ್ಲಿ ಸಂಪೂರ್ಣ ವಿದ್ಯುದೀಕರಣ ಗೊಳ್ಳಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಸಚಿವ ಆರ್.ವಿ.ದೇಶಪಾಂಡೆ, ಶಾಸಕರಾದ ಎಸ್.ಆರ್.ವಿಶ್ವನಾಥ್, ವೈ.ಎ.ನಾರಾಯಣಸ್ವಾಮಿ, ಡಾ.ಸಿ.ಎನ್.ಅಶ್ವಥನಾರಾಯಣ, ನೈರುತ್ಯರೈಲ್ವೆ ಇಲಾಖೆಯ ಅಧಿಕಾರಿ ರವೀಂದ್ರಗುಪ್ತ ಉಪಸ್ಥಿತರಿದ್ದರು.





