ದೇವಳದಿಂದ ಕದ್ದು ಅಡವಿಟ್ಟ ಚಿನ್ನಾಭರಣ ಪೊಲೀಸ್ ವಶಕ್ಕೆ
ಸುಬ್ರಹಣ್ಯ, ಜು.23: ಇಲ್ಲಿಗೆ ಸಮೀಪದ ಏನೆಕಲ್ ಗ್ರಾಮದ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಉಳ್ಳಾಕುಲು ಉಳ್ಳಾಲ್ತಿ ಮತ್ತು ಬಚ್ಚನಾಯಕ ದೈವಸ್ಥಾನದಿಂದ ಕದ್ದು ಬ್ಯಾಂಕ್ ಸೊಸೈಟಿಗಳಲ್ಲಿ ಅಡವಿಟ್ಟ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಚಿನ್ನಾಭರಣ ಕಳವುಗೈದು ಪರಾರಿ ಯಾಗಿದ್ದ ದೇವಳದ ಅರ್ಚಕ ಮುರಳಿ ವೆಂಕಟೇಶನನ್ನು ಬೆಂಗಳೂರಿನ ಜೆಪಿ ನಗರದಿಂದ ಬಂಧಿಸಿದ್ದ ಸುಳ್ಯ ಪೊಲೀಸರು, ವಿಚಾರಣೆ ನಡೆಸಿ ದಾಗ ಬೆಳ್ಳಾರೆಯ ಕೋಶಮಟ್ಟಂ ಫೈನಾನ್ಸ್‌ನಲ್ಲಿ 2, ಸುಬ್ರಹ್ಮಣ್ಯದಲ್ಲಿರುವ ಐನೆಕಿದು ಸಹಕಾರಿ ಬ್ಯಾಂಕ್, ಮಹಿಳಾ ವಿವಿಧೊದ್ಧೇಶ ಸಹಕಾರಿ ಸೊಸೈಟಿನಲ್ಲಿ 4 , ಸುಬ್ರಹ್ಮಣ್ಯ ಹಾಗೂ ಮಾಣಿಯ ವ್ಯಾಪಾರಿಯಲ್ಲಿ 10, ಪುತ್ತೂರಿನ ಬಸ್ ನಿಲ್ದಾಣದ ಬಳಿಯ ಮುತ್ತೂಟ್ ಫೈನಾನ್ಸ್ ಮತ್ತು ಅರುಣಾ ಚಿತ್ರಮಂದಿರದ ಬಳಿಯ ಮಣಪ್ಪುರಂ ಫೈನಾನ್ಸ್‌ನಲ್ಲಿ 9 ಉಂಗುರಗಳು ಹಾಗೂ ಒಂದು ಚಿನ್ನದ ಸರ, ಸುಳ್ಯ ಪೇಟೆಯ ಶ್ರೀಹರಿ ಸಂಕೀರ್ಣ ಹತ್ತಿರದ ಕೋಶಮಟ್ಟಂ ಫೈನಾನ್ಸ್‌ನಲ್ಲಿ 3, ಬಸ್ ನಿಲ್ದಾಣ ಬಳಿಯ ಮುತ್ತೂಟ್ ಫೈನಾನ್ಸ್‌ನಲ್ಲಿ 3 ಉಂಗುರ ವನ್ನು ಅಡವಿಟ್ಟು ಹಣ ಪಡೆದು ಕೊಂಡಿರುವುದಾಗಿ ಹೇಳಿದ್ದಾನೆ. ಈ ಎಲ್ಲಾ ಬ್ಯಾಂಕ್ ಹಾಗೂ ಫೈನಾನ್ಸ್‌ಗಳಿಗೆ ಸುಳ್ಯ ವೃತ್ತ ನಿರೀಕ್ಷಕ ವಿ. ಕೃಷ್ಣಯ್ಯ ನೇತೃತ್ವದ ತಂಡ ಆರೋಪಿ ಅರ್ಚಕ ಮುರಳಿ ವೆಂಕಟೇಶನನ್ನು ಕರೆದುಕೊಂಡು ಹೋಗಿ 30 ಚಿನ್ನದ ಉಂಗುರ ಹಾಗೂ ಒಂದು ಚಿನ್ನದ ಸರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ 2 ಉಂಗುರ ವಶಪಡಿಸಲು ಬಾಕಿ ಇದೆ.
ತಿಂಗಳ ಹಿಂದೆಯೇ ಚಿನ್ನವನ್ನು ಕಳವು ಮಾಡಿ ಬೇರೆ ಬೇರೆ ಬ್ಯಾಂಕ್ ಹಾಗೂ ಫೈನಾನ್ಸ್‌ನಲ್ಲಿ ವ್ಯವಹಾರ ಮಾಡಲಾಗಿದೆ. ನೂತನ ಸಮಿತಿಗೆ ಅಧಿಕಾರ ಹಸ್ತಾಂತರ ಸಂದರ್ಭ ಲಾಕರ್‌ನಲ್ಲಿರುವ ಚಿನ್ನವನ್ನು ಲೆಕ್ಕಮಾಡಲೆಂದು ನೋಡಿದಾಗ ಲಾಕರ್‌ಕೀ ದೇವಳದ ಕೀ ಗೊಂಚಲಿನಿಂದ ಕಾಣೆಯಾಗಿರುವುದರಿಂದ ಪ್ರಕರಣ ಬೆಳಕಿಗೆ ಬಂದಿತ್ತು.
ಆರೋಪಿಯನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ 3 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.





