ಮದ್ಯ ಮಾರಾಟ ಲೈಸೆನ್ಸ್: ಪರಿಶಿಷ್ಟರಿಗೆ ಮೀಸಲಾತಿ ರದ್ದು; ಹೈಕೋರ್ಟ್ ತೀರ್ಪು

ಉಡುಪಿ, ಜು.23: ರಾಜ್ಯದಲ್ಲಿ ಮದ್ಯ ಮಾರಾಟ ಲೈಸೆನ್ಸ್ ನೀಡಿಕೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡಿ 2014ರ ಜೂ.9ರಂದು ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಗೊಳಿಸಿ ರಾಜ್ಯ ಹೈಕೋರ್ಟ್ ಜು.22ರಂದು ತೀರ್ಪು ನೀಡಿದೆ ಎಂದು ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ ಹೆಗ್ಡೆ ತಿಳಿಸಿದ್ದಾರೆ.
ಈ ಪ್ರಕರಣ ಮೂಲಭೂತ ಹಕ್ಕುಗಳ ವ್ಯಾಪ್ತಿಗೆ ಒಳಪಡುವುದಿಲ್ಲ. ಅಬಕಾರಿ ಉದ್ಯಮದಲ್ಲಿ ರಿಯಾಯಿತಿ ನೀಡುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಪ್ರಕರಣವೊಂದರಲ್ಲಿ ಆದೇಶ ನೀಡಿದೆ. ಸರಕಾರದ ಈ ಕ್ರಮ ಪಕ್ಷಪಾತ ಧೋರಣೆಯನ್ನು ಅನುಸರಿಸಿದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅಧಿಸೂಚನೆಯನ್ನು ರದ್ದುಗೊಳಿಸಿದ್ದಾರೆ ಎಂದವರು ಹೇಳಿದ್ದಾರೆ.
ರಾಜ್ಯದಲ್ಲಿ ನಗರ ಪ್ರದೇಶದ ವಸತಿಗೃಹಗಳಲ್ಲಿ 30 ಡಬಲ್‌ರೂಮ್‌ಗಳಿದ್ದರೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 20 ಡಬಲ್ ರೂಮ್‌ಗಳಿದ್ದರೆ ಅಲ್ಲಿ ಮದ್ಯಮಾರಾಟದ ಲೈಸನ್ಸ್ ಗಳಿಗೆ (ಸಿಎಲ್-7) ಸರಕಾರಿ ಆದೇಶವಿದೆ. ರಾಜ್ಯದಲ್ಲಿ ಈಗಾಗಲೆ 900ಕ್ಕೂ ಅಧಿಕ ಇಂತಹ ಸನ್ನದುಗಳು ಕಾರ್ಯಾಚರಿಸುತ್ತಿವೆ.
ಆದರೆ 2014ರ ಜ.20ರಂದು ಸರಕಾರ ಹೊರಡಿಸಿದ ಕರಡು ಅಧಿಸೂಚನೆಯಲ್ಲಿ ನಗರಪ್ರದೇಶದಲ್ಲಿ 15 ಹಾಗೂ ಗ್ರಾಮೀಣ ಪ್ರದೇಶದಲ್ಲಿ 10 ರೂಮ್‌ಗಳನ್ನು ಹೊಂದಿದ್ದರೆ ಪ.ಜಾತಿ ಮತ್ತು ಪ.ಪಂಗಡದ ಜನರು ಲೈಸನ್ಸ್ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು.
ರಾಜ್ಯ ಮದ್ಯಮಾರಾಟಗಾರರ ಒಕ್ಕೂಟ ಈ ಅಧಿಸೂಚನೆಗೆ ಲಿಖಿತ ಆಕ್ಷೇಪಗಳನ್ನು ಸಲ್ಲಿಸಿತ್ತು. ಆದರೆ ಇದನ್ನು ಪರಿಗಣಿಸದೇ ಜೂ.9ರಂದು ಅಂತಿಮ ಅಧಿಸೂಚನೆ ಹೊರಡಿಸಲಾಯಿತು. ಇದನ್ನು ರದ್ದುಗೊಳಿಸುವಂತೆ ಕೋರಿ ಒಕ್ಕೂಟ 2015ರ ಮೇ 6ರಂದು ಹೈಕೋರ್ಟ್‌ಗೆ ರಿಟ್‌ಅರ್ಜಿ ಸಲ್ಲಿಸಿತ್ತು. ಕಳೆದ ಮಾ.11ರಂದು ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅವರು ಈ ಆದೇಶ ದೋಷಪೂರಿತವಾಗಿದೆ ಎಂದು ಅಭಿಪ್ರಾಯ ಪಟ್ಟು ತಡೆಯಾಜ್ಞೆ ನೀಡಿದ್ದರು. ಇದೀಗ ಜು.22ರಂದು ಅಂತಿಮ ಆದೇಶ ಹೊರಬಿದ್ದಿದೆ ಎಂದು ಗೋವಿಂದರಾಜ್ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







