ನೀವು ದುಬಾರಿ ಔಷಧಿ ಖರೀದಿಸಲು ಖಾಸಗಿ ಆಸ್ಪತ್ರೆಗಳು ನಿರ್ಬಂಧಿಸುವುದು ಏಕೆ?
ಮಹತ್ವದ ಮಾಹಿತಿ
ಹೊಸದಿಲ್ಲಿ, ಜು.24: ಖಾಸಗಿ ಆಸ್ಪತ್ರೆಗಳ ದಂಧೆಯಲ್ಲಿ ಔಷಧ ಮಾರಾಟವೂ ಒಂದು. ಔಷಧ ಹಾಗೂ ವೈದ್ಯಕೀಯ ಸಾಧನಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ, ರೋಗಿಗಳಿಗೆ ಗರಿಷ್ಠ ದರದಲ್ಲಿ ಮಾರಾಟ ಮಾಡುವ ಆಸ್ಪತ್ರೆಗಳ ಒಟ್ಟು ಲಾಭದಲ್ಲಿ ಶೇಕಡ 15.35ರಷ್ಟು ಲಾಭ ಬರುವುದು ಈ ದಂಧೆಯಿಂದ. ರೋಗಿಗಳಿಗೆ ಆಯ್ಕೆ ಸೀಮಿತವಾಗಿರುವುದರಿಂದ ಇಂಥ ಔಷಧ ದುಬಾರಿಯಾಗುತ್ತಿದೆ.
ಇಲ್ಲೊಂದು ಉದಾಹರಣೆ ಇದೆ ನೋಡಿ. ಶಾಲಿನಿ ಪಾಹ್ವ ಎಂಬ ಮಹಿಳೆ ಮಲ್ಟಿಪಲ್ ಮೈಲೊಮಾ (ಒಂದು ಬಗೆಯ ಕ್ಯಾನ್ಸರ್)ಗೆ ಚಿಕಿತ್ಸೆ ಪಡೆಯುತ್ತಿದ್ದರು. ಆಕೆಗೆ ನೊವರಿಟಿಸ್ ಕಂಪೆನಿಯ ರೊಮೆಟಾ ಎಂಬ ಚುಚ್ಚುಮದ್ದು ನೀಡಲಾಯಿತು. ಇದರ ಬೆಲೆ 15,200 ರೂಪಾಯಿ. ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ, ಗುರ್ಗಾಂವ್ನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ನಿರಂತರ ಮೂರು ವರ್ಷಗಳ ಕಾಲ ಇದನ್ನು ತೆಗೆದುಕೊಳ್ಳಬೇಕು. ಒಮ್ಮೆ ಕೆಲಸದ ಮೇಲೆ ಬೆಂಗಳೂರಿಗೆ ಹೋಗಿದ್ದಾಗ ಈ ಚುಚ್ಚುಮದ್ದಿಗೆ ಕೇವಲ 4 ಸಾವಿರ ರೂಪಾಯಿ ವೆಚ್ಚವಾಯಿತು. ಬೆಲೆ ವ್ಯತ್ಯಾಸದ ಬಗ್ಗೆ ಗುರ್ಗಾಂವ್ ಆಸ್ಪತ್ರೆಯಲ್ಲಿ ಕೇಳಿದಾಗ, ಅವರು ಸಿಪ್ಲಾ ರೊಲ್ಡಿರಾ ಎಂಬ 2,800 ರೂ. ಬೆಲೆಯ ಚುಚ್ಚುಮದ್ದು ನೀಡಿದರು!
ನಾನು ಕೇಳಿ ಚೌಕಾಶಿ ಮಾಡಿದ ಮೇಲೆಯೇ ಏಕೆ ನನಗೆ ಅಗ್ಗದ ಔಷಧಿಯ ಆಯ್ಕೆ ನೀಡಲಾಯಿತು? ಮಂಡಿಯಲ್ಲಿ ಚೌಕಾಶಿ ಮಾಡಿದಂತೆ ಆಸ್ಪತ್ರೆಗಳಲ್ಲೂ ಮಾಡಬೇಕೇ? ಇದೀಗ ನಾನು ಬೇರೆ ಆಸ್ಪತ್ರೆಯಲ್ಲಿ ಈ ಚುಚ್ಚುಮದ್ದು ತೆಗೆದುಕೊಳ್ಳುತ್ತೇನೆ. ನ್ಯಾಟ್ಕೊ ಕಂಪೆನಿಯ ರೊಲದೊನಟ್ ಬೆಲೆ ಕೇವಲ 800 ರೂಪಾಯಿ ಎಂದು ಪಾಹ್ವ ವಿವರಿಸುತ್ತಾರೆ.
ಕಾರಣ ಇಷ್ಟೇ. ರೊಮೆಟಾ ಚುಚ್ಚುಮದ್ದನ್ನು ಸ್ಟಾಕಿಸ್ಟ್ಗಳಿಗೆ 13 ಸಾವಿರ ರೂ.ಗೆ ನೀಡಲಾಗುತ್ತದೆ. ಇದರಲ್ಲಿ ಲಾಭದ ಪ್ರಮಾಣ 2,200 ರೂ. ಇದೆ. ಆದರೆ 2,800 ರೂ.ಚುಚ್ಚುಮದ್ದಿನಲ್ಲಿ ನಿಮಗೆ ಅಷ್ಟು ಲಾಭ ಸಿಗಲು ಸಾಧ್ಯವೇ ಇಲ್ಲ ಎನ್ನುವುದು ಔಷಧ ಕ್ಷೇತ್ರದ ತಜ್ಞರೊಬ್ಬರು ಬಿಚ್ಚಿಡುವ ರಹಸ್ಯ.
ಅಂತೆಯೇ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಸೋಂಕಿಗಾಗಿ ನೀಡುವ ಸಿಪ್ಲಾ ಬ್ರಾಂಡ್ನ ಮೆರೊಕ್ರಿಟ್ ಉದಾಹರಣೆ ತೆಗೆದುಕೊಂಡರೆ, ಇದರ ಬೆಲೆ ಗ್ರಾಂಗೆ 2,965 ರೂ. ಒಬ್ಬ ವಯಸ್ಕರಿಗೆ ಪ್ರತಿ 8 ಗಂಟೆಗೊಮ್ಮೆ 10 ದಿನಗಳ ಕಾಲ 1.2 ಮಿಲಿಗ್ರಾಂ ನೀಡಬೇಕು. ಇದರ ಬೆಲೆ 90 ಸಾವಿರದಿಂದ 1.8 ಲಕ್ಷ ಆಗುತ್ತದೆ. ಆಸ್ಪತ್ರೆಗಳಿಗೆ ಇದನ್ನು ಗ್ರಾಂಗೆ 700-900 ರೂ.ದರದಲ್ಲಿ ನೀಡಲಾಗುತ್ತದೆ. ಅಂದರೆ ಒಬ್ಬ ರೋಗಿಯಿಂದ 70 ಸಾವಿರದಿಂದ ಹಿಡಿದು 1.4 ಲಕ್ಷ ರೂ.ವರೆಗೆ ಲಾಭ ಮಾಡುತ್ತಾರೆ. ಇಂಥ ಸಾಕಷ್ಟು ಉದಾಹರಣೆ ನೀಡಬಹುದು.