ನಾಳೆಯಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ
ಮುಷ್ಕರದ ಮೂಲಕವೇ ಬೇಡಿಕೆ ಈಡೇರಿಸಿಕೊಳ್ಳುವ ನೌಕರರ ಸಂಘಟನೆಗಳ ಯೋಜನೆ

ಬೆಂಗಳೂರು, ಜು.24: ಸರಕಾರ ಮತ್ತು ಸಾರಿಗೆ ನೌಕರರ ಸಂಘಟನೆಗಳ ನಡುವಿನ ಮಾತುಕತೆ ಫಲ ನೀಡದ ಪರಿಣಾಮವಾಗಿ ಸೋಮವಾರದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಗೊಳ್ಳಲಿದೆ.
ಸಾರಿಗೆ ನೌಕರರ ಮುಷ್ಕರದಿಂದಾಗಿ ರವಿವಾರ ರಾತ್ರಿಯಿಂದಲೇ ಬಸ್‌ಗಳ ಸೇವೆ ಸ್ಥಗಿತಗೊಳ್ಳಲಿದೆ. ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ತೊಂದರೆ ಅನುಭವಿಸಲಿದ್ದಾರೆ. ನೌಕರರು ಶೇ. 35 ರಷ್ಠು ವೇತನ ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ ಸರಕಾರ ಶೇ.10 ಕ್ಕಿಂತ ಹೆಚ್ಚು ವೇತನ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಇದು ಸರಕಾರ ಮತ್ತು ಸಾರಿಗೆ ನೌಕರರ ನಡುವಿನ ಮಾತುಕತೆ ವಿಫಲಗೊಳ್ಳಲು ಕಾರಣವಾಗಿದೆ.
ಕಳೆದ ಎಪ್ರಿಲ್ ನಲ್ಲಿ ಈ ಬಗ್ಗೆ ನಾಲ್ಕು -ಐದು ಬಾರಿ ಮಾತು ನಡೆದಿದ್ದರೂ, ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಸರಕಾರ ಸಂಧಾನದ ಬಾಗಿಲು ತೆರದಿದ್ದರೂ, ಸರಕಾರದ ಮಾತನ್ನು ಒಪ್ಪಲು ನೌಕರರ ಸಂಘಟನೆಗಳು ಒಪ್ಪಿಕೊಳ್ಳಲು ತಯಾರಿಲ್ಲ. ಈ ಕಾರಣದಿಂದಾಗಿ ಸಮಸ್ಯೆ ಉಂಟಾಗಿದೆ. ರಸ್ತೆ ಸಾರಿಗೆ ನೌಕರರ ಸಂಘಟನೆಗಳು ಮುಷ್ಕರದ ಮೂಲಕವೇ ನಮ್ಮ ಬೇಡಿಕೆ ಈಡೇರಿಸಿಕೊಳ್ಳುತ್ತೇವೆ ಎಂದು ಹಟ ಹಿಡಿದಿವೆ.
2012ರಲ್ಲಿ ಮಾಡಿದ ವೇತನ ಪರಿಷ್ಕರಣೆಯಿಂದ ಕಳೆದ ನಾಲ್ಕು ವರ್ಷಗಳಲ್ಲಿ ನಿಗಮಗಳಿಗೆ 750 ಕೋಟಿ ರೂ. ನಷ್ಟವಾಗಿದೆ. ಈಗ ಮತ್ತೆ ಶೇ.10ರಷ್ಟು ಹೆಚ್ಚಳದಿಂದ ಅಂದಾಜು 1,413 ಕೋಟಿ ಹೊರೆ ಆಗಲಿದೆ. ಈ ಕಾರಣದಿಂದಾಗಿ ನೌಕರರ ಬೇಡಿಕೆಯನ್ನು ಈಡೆರಿಸಲು ಸಾಧ್ಯವಿಲ್ಲ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದರ್ ಕುಮಾರ ಕಟಾರಿಯಾ ಅಭಿಪ್ರಾಯಪಟ್ಟಿದ್ದಾರೆ.
ಮಧ್ಯರಾತ್ರಿಯಿಂದಲೇ ಮುಷ್ಕರ ಆರಂಭವಾಗಲಿದೆ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅನಂತ ಸುಬ್ಬರಾವ್ ತಿಳಿಸಿದ್ದಾರೆ.
ರಸ್ತೆ ಸಾರಿಗೆ ನೌಕರರ ಸಂಘಟನೆಗಳು ಮುಷ್ಕರದ ಮೂಲಕವೇ ಬೇಡಿಕೆ ಈಡೇರಿಸಿಕೊಳ್ಳುವ ಯೋಜನೆ ಹಾಕಿಕೊಂಡಿವೆ. ಆದ್ದರಿಂದ ಮುಷ್ಕರದ ಬಿಸಿ ಜೋರಾಗಿಯೇ ತಟ್ಟುವ ಸಾಧ್ಯತೆ ಕಂಡು ಬಂದಿವೆ . ಸರಕಾರ ನೌಕರರ ಮುಷ್ಕರದಿಂದ ಜನಸಾಮಾನ್ಯರಿಗೆ ಉಂಟಾಗಲಿರುವ ತೊಂದರೆಯನ್ನು ತಪ್ಪಿಸಲು ಮುಂದಾಗಿದೆ. ಖಾಸಗಿ ವಾಹನಗಳ ಓಡಾಟಕ್ಕೆ ಅನುಮತಿ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಆದರೆ ಎಸ್ಮಾ ಕಾಯಿದೆ ಜಾರಿಗೊಳಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಭೇಟಿಯಾಗಿ ಚರ್ಚೆ ನಡೆಸಿದರು. ಮುಷ್ಕರ ನಡೆಸದಂತೆ ನೌಕರರ ಸಂಘಟನೆಗಳಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಮುಷ್ಕರ ಪ್ರಶ್ನಿಸಿ ಪಿಐಎಲ್ : ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರವನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ವಕೀಲರಾದ ಆರ್. ವಾಸುದೇವನ್ ಪಿಐಎಲ್ ಸಲ್ಲಿಸಿ " ಮುಷ್ಕರ ತಡೆಯಲು ಸರಕಾರಕ್ಕೆ ಸೂಚನೆ ನೀಡುವಂತೆ ಮನವಿ ಮಾಡಿದ್ದಾರೆ. ಸೋಮವಾರ ರಾಜ್ಯ ಹೈಕೋರ್ಟ್‌ನ ವಿಭಾಗೀಯ ಪೀಠ ಪಿಐಎಲ್ ನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.







