ಈ ವಿಚಾರದಲ್ಲಿ ರಾಜ್ಯದ ಪ್ರಥಮ ನಗರ ಮಂಗಳೂರು!
ರಾತ್ರಿ ವಸತಿ ರಹಿತ ನಾಗರಿಕರಿಗೆ ವಸತಿ ವ್ಯವಸ್ಥೆ

ಮಂಗಳೂರು,ಜು.24: ಮಂಗಳೂರು ಮಹಾನಗರ ಪಾಲಿಕೆಯು ರಾಜ್ಯದಲ್ಲಿಯೆ ಮೊದಲ ಬಾರಿಗೆ ರಾತ್ರಿ ವಸತಿ ರಹಿತ ನಾಗರಿಕರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಿ ಹಿರಿಮೆಗೆ ಪಾತ್ರವಾಗಿದೆ.
ನಗರದಲ್ಲಿ ಹಲವಾರು ಜನರು ರಾತ್ರಿ ವಸತಿ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ದೂರದ ಊರಿನಿಂದ ಬಂದವರು ಮತ್ತೆ ಅದೇ ದಿನ ಹಿಂದುರುಗಲಾರದೆ ಕಷ್ಟ ಪಡುವವರು ಇದ್ದಾರೆ. ಸೂರಿಲ್ಲದೆ ಬಸ್‌ಸ್ಟಾಂಡ್ ಆಶ್ರಯಿಸುವವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಇವರೆಲ್ಲರಿಗೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಹೊಸ ರೀತಿಯ ವ್ಯವಸ್ಥೆಯನ್ನು ಮಹಾನಗರ ಪಾಲಿಕೆ ಕಲ್ಪಿಸಿದೆ.
ಫ್ಯಾಮಿಲಿ ಸಮೇತ ಬಂದವರಿಗೂ ರಾತ್ರಿ ಉಳಿದುಕೊಳ್ಳಲು ಇಲ್ಲಿ ವ್ಯವಸ್ಥೆಯಿದೆ. ಇದೀಗ 99.80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ನೆಲ ಅಂತಸ್ತಿನ ಕಟ್ಟಡದಲ್ಲಿ 75 ಜನರಿಗೆ ತಂಗಬಹುದಾಗಿದೆ. ಇನ್ನು ಮುಂದೆ 105 ಜನರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಮೊದಲನೆ ಮಹಡಿಯನ್ನು ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ.
ಇಲ್ಲಿ ರಾತ್ರಿ ವಸತಿ ಮಾಡುವವರಿಗೆ ಮಲಗಲು, ಬಟ್ಟೆ ಒಗೆಯಲು, ಸ್ನಾನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ರಾಜ್ಯದಲ್ಲಿಯೆ ಪ್ರಥಮವಾಗಿ ಈ ರೀತಿಯ ವ್ಯವಸ್ಥೆಯನ್ನು ಮಹಾನಗರಪಾಲಿಕೆಯಿಂದ ಮಾಡಲಾಗಿದೆ. ಮಂಗಳೂರಿಗೆ ಬಂದವರು ರಾತ್ರಿ ಉಳಿದುಕೊಳ್ಳಲು ಸಮಸ್ಯೆಯಾಗಬಾರದೆಂಬ ದೃಷ್ಟಿಯಿಂದ ಈ ಹೊಸ ಯೋಜನೆ ಕೈಗೊಳ್ಳಲಾಗಿದೆ. ರಾತ್ರಿ ಉಳಿದುಕೊಳ್ಳಲು ಸಮಸ್ಯೆ ಇರುವ ಯಾರು ಕೂಡ ರಾತ್ರಿ ವಸತಿ ವ್ಯವಸ್ಥೆಯನ್ನು ಬಳಸಬಹುದು.
ಎಂ. ಹರಿನಾಥ್, ಮೇಯರ್, ಮಂಗಳೂರು ಮಹಾನಗರ ಪಾಲಿಕೆ







