ಬೆಂಗಳೂರು ಮಾದರಿಯಲ್ಲಿ ಮೆಲ್ಕಾರ್ ಅಭಿವೃದ್ಧಿ: ಸಚಿವ ರೈ
ಮಾರ್ನಬೈಲ್-ಸಜಿಪನಡು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ

ಬಂಟ್ವಾಳ, ಜು. 24: ತಾಲೂಕಿನ ಮೆಲ್ಕಾರ್ ಪೇಟೆಯನ್ನು ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಕಾರ್ಯ ನಡೆಸಲಾಗುತ್ತಿದ್ದು ವಿದ್ಯುತ್ ಕಂಬ, ಟೆಲಿಫೋನ್ ಕಂಬ, ನೀರಿನ ಪೈಪ್‌ಗಳನ್ನು ತೆರವುಗೊಳಿಸುವ ಸಣ್ಣಪುಟ್ಟ ಕಾರ್ಯಗಳು ಬಾಕಿಯಿದೆ. ಮಳೆಗಾಲದ ಬಳಿಕ ಮೆಲ್ಕಾರ್ ಬೆಂಗಳೂರು ಮಾದರಿಯಲ್ಲಿ ಕಂಗೊಳಿಸಲಿದ್ದು ಬಂಟ್ವಾಳ ತಾಲೂಕಿನಲ್ಲಿ ಒಂದು ಪ್ರಮುಖ ಪಟ್ಟಣವಾಗಿ ಮೂಡಿ ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಪಾಣೆಮಂಗಳೂರು - ತೊಕ್ಕೊಟ್ಟು ಹಾಗೂ 1.75 ಕೋಟಿ ರೂ. ವೆಚ್ಚದಲ್ಲಿ ಮಾರ್ನಬೈಲ್ - ಸಜಿಪನಡುವರೆಗಿನ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸಗೈದು ಬಳಿಕ ಮಾತನಾಡಿದ ಅವರು, ನೇತ್ರಾವತಿ ನದಿ ತೀರದಿಂದಲೇ ಪಾಣೆಮಂಗಳೂರಿನಿಂದ ಶ್ರೀ ಕ್ಷೇತ್ರ ನಂದಾವರಕ್ಕೆ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ನೂತನ ರಸ್ತೆ ನಿರ್ಮಿಸಲು ಯೋಜನೆಯೊಂದನ್ನು ರೂಪಿಸಲಾಗಿದ್ದು ಈ ಸಂಬಂಧ ಈಗಾಗಲೇ ಪ್ರಸ್ತಾವನೆಯೊಂದನ್ನು ಸಲ್ಲಿಸಲಾಗಿದೆ ಎಂದರು.
ಸುರತ್ಕಲ್ - ಕಬಕ ವರೆಗಿನ ರಸ್ತೆ ಅಭಿವೃದ್ಧಿಯಲ್ಲಿ ಪಾಣೆಮಂಗಳೂರು, ನಂದಾವರ ಪೇಟೆಯ ರಸ್ತೆ ಕೂಡಾ ಕಾಂಕ್ರೀಟ್‌ಕರಣಗೊಂಡು ಅಭಿವೃದ್ಧಿಗೊಳ್ಳುವುದರ ಮೂಲಕ ಈ ಬಾಗದ ಜನರ ಬಹುದಿನದ ಬೇಡಿಕೆಯೊಂದು ಈಡೇರಿದಂತಾಗಿದೆ ಎಂದ ಅವರು, ನಿರ್ಮಾಣ ಹಂತದಲ್ಲಿರುವ ತುಂಬೆ ವೆಂಟೆಡ್ ಡ್ಯಾಂ ಮುಳುಗಡೆ ಸಂತ್ರಸ್ಥರಿಗೆ ಸೂಕ್ತ ಪರಿಹಾರವನ್ನು ನೀಡುವ ಕೆಲಸ ಸರಕಾರದಿಂದ ನಡೆಯಲಿದೆ ಎಂದು ಹೇಳಿದರು.
ಜಿಪಂ ಸದಸ್ಯರಾದ ಎಂ.ಎಸ್.ಮುಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಮಂಜುಳಾ ಮಾವೆ, ತಾಪಂ ಸದಸ್ಯರಾದ ಸಂಜೀವ ಪೂಜಾರಿ, ನಸೀಮಾ ಬೇಗಂ, ಮಾಜಿ ಜಿಪಂ ಸದಸ್ಯ ಎ.ಸಿ.ಭಂಡಾರಿ, ಗ್ರಾಪಂ ಅಧ್ಯಕ್ಷ ಶರೀಫ್ ನಂದಾವರ, ರಝಾಕ್ ಕುಕ್ಕಾಜೆ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಕಾಂಗ್ರೆಸ್ ಮುಖಂಡ ಬಿ.ಎಚ್.ಖಾದರ್, ಗುತ್ತಿಗೆದಾರ ಇಕ್ಬಾಲ್ ಅಹ್ಮದ್, ಮಾಜಿ ತಾಪಂ ಸದಸ್ಯ ಸಂಪತ್ ಕುಮಾರ್ ಶೆಟ್ಟಿ, ಅರಣ್ಯ ಅಭಿವೃದ್ಧಿ ನಿಗಮದ ಸದಸ್ಯ ಪರಮೇಶ್ವರ ಎಂ, ಮೊದಲಾದವರು ವೇದಿಕೆಯಲ್ಲಿದ್ದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್ ತಾಂತ್ರಿಕ ವರದಿಯನ್ನು ಮಂಡಿಸಿದರು. ಇಂಜಿನಿಯರ್‌ಗಳಾದ ಅರುಣ್ ಪ್ರಕಾಶ್, ಪ್ರೀತಂ, ಚಿದಂಬರ ಸ್ವಾಮಿ, ಗೋಪಾಲ್ ಉಪಸ್ಥಿತರಿದ್ದರು.
ಕೊಳ್ನಾಡು ಪಂಚಾಯತ್ ಅಧ್ಯಕ್ಷ ಸುಭಾಶ್‌ಚಂದ್ರ ಶೆಟ್ಟಿ ಸ್ವಾಗತಿಸಿದರು. ಸಜಿಪಮೂಡ ಗ್ರಾಪಂ ಅಧ್ಯಕ್ಷ ಗಣಪತಿ ಭಟ್ ವಂದಿಸಿದರು. ಹಮೀದ್ ಗೊಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.







