ಬೆಳ್ತಂಗಡಿ: ನಾಪತ್ತೆಯಾದ ಏಕನಾಥ್‌ರ ಬಗ್ಗೆ ಮಾಹಿತಿಯಿಲ್ಲದೆ ಕಂಗಾಲಾದ ಮನೆಮಂದಿ
ಯೋಧರ ಮನೆಗೆ ಎಸ್ಪಿ, ವಿಂಗ್ ಕಮಾಂಡರ್ ಭೇಟಿ: ಸಾಂತ್ವನ

ಬೆಳ್ತಂಗಡಿ, ಜು.24: ಚೆನ್ನೈನಿಂದ ಪೋರ್ಟಬ್ಲೇರ್‌ಗೆ ತೆರಳುತ್ತಿದ್ದ ವೇಳೆ ನಾಪತ್ತೆಯಾದ ವಾಯುಸೇನೆಯ ಎಎನ್ -32 ವಿಮಾನದಲ್ಲಿದ್ದ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ನಿವಾಸಿ ಯೋಧ ಏಕನಾಥ ಶೆಟ್ಟಿಯವರ ಮನೆಯಲ್ಲಿ ಇನ್ನೂ ಆತಂಕ, ದುಃಖ ಆವರಿಸಿದೆ. ವಿಮಾನದ ಬಗ್ಗೆ ಯಾವುದೇ ಮಾಹಿತಿಗಳು ಸಿಗದಿರುವ ಹಿನ್ನಲೆಯಲ್ಲಿ ಮನೆಯವರು ಸಂಬಂಧಿಕರು ಸೇನೆಯಿಂದ ಬರುವ ಮಾಹಿತಿಗಾಗಿ ಕಾಯುತ್ತಿದ್ದಾರೆ.
ಇದೀಗ ಮನೆಯವರಿಗೆ ವಿಮಾನದ ಬಗ್ಗೆ ಹಾಗೂ ಹುಡುಕಾಟದ ಬಗ್ಗೆ ಆಗಾಗ ಚೆನ್ನೈ ಕಂಟ್ರೋಲ್ ರೂಮ್‌ನಿಂದ ಮಾಹಿತಿ ನೀಡುವ ವ್ಯವಸ್ಥೆಯನ್ನು ಮಾಡಲಾಗಿದ್ದು ಯಾವುದೇ ಮಾಹಿತಿ ಬರಬಹುದು ಎಂದು ಮನೆಯವರು ಎದುರು ನೋಡುತ್ತಿದ್ದಾರೆ.
ಇಂದು ಇವರ ಮನೆಗೆ ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ಭೇಟಿ ನೀಡಿ ಏಕನಾಥ್‌ರ ಪತ್ನಿ ಜಯಂತಿ ಹಾಗೂ ಮನೆಯವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೂಡಾ ಮನೆಗೆ ಭೇಟಿ ನೀಡಿದರು.
ರಾಜ್ಯ ಪೊಲೀಸ್ ಇಲಾಖೆಯು ಸೇನೆಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಜಿಲ್ಲಾ ಪೊಲೀಸರಿಗೆ ಆಗಾಗ ಮಾಹಿತಿಗಳನ್ನು ನೀಡಲಾಗುತ್ತಿದೆ. ಮನೆಯವರಿಗೆ ಯಾವುದೇ ರೀತಿಯಲ್ಲಿ ನೆರವಾಗಲು ಸಿದ್ಧರಿರುವುದಾಗಿ ತಿಳಿಸಿದರು. ಅವರೊಂದಿಗೆ ವಿಂಗ್ ಕಮಾಂಡರ್ ಆರ್.ಜಿ ಹೆಗಡೆ ಹಾಗೂ ಇತರ ಅಧಿಕಾರಿಗಳು ಇದ್ದರು.







