ಸಮಾನತೆಗಾಗಿ ಸಂಘಟಿತ ಹೋರಾಟ ಅಗತ್ಯ: ಸೀತಾರಾಂ ಯೆಚೂರಿ
.jpg)
ಹಾಸನ, ಜು.24: ಸಮಾನತೆಗಾಗಿ ಸಂಘಟಿತ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ರಾಜ್ಯಸಭಾ ಸದಸ್ಯ ಸೀತಾರಾಂ ಯೆಚೂರಿ ಅಭಿಪ್ರಾಯಪಟ್ಟಿದ್ದಾರೆ.
ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್‌ರ 125ನೆ ಜನ್ಮದಿನದ ವರ್ಷಾಚರಣೆ ಅಂಗವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ‘ಸ್ವತಂತ್ರೋತ್ತರ ಭಾರತದಲ್ಲಿ ದಲಿತರ ಸ್ಥಿತಿಗತಿ ಮತ್ತು ಸವಾಲುಗಳು’ ವಿಷಯದ ಕುರಿತು ನಡೆದ ರಾಷ್ಟ್ರಮಟ್ಟದ ಎರಡನೆ ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗೋ ರಕ್ಷಣೆಯ ನೆಪದಲ್ಲಿ ದೇಶದಲ್ಲಿ ದಮನಿತರ ಮೇಲೆ ಹಲ್ಲೆ ನಡೆಸಲು ಮುಂದಾಗಿರುವ ಕೋಮುವಾದಿ ಶಕ್ತಿಗಳ ವಿರುದ್ಧ ಸಂಘಟಿತರಾಗಿ ಹೋರಾಟ ನಡೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರದಲ್ಲಿ ಕೆಲ ಕೋಮುವಾದಿ ಶಕ್ತಿಗಳು ಗೋ ರಕ್ಷಣೆಯ ನೆಪವೊಡ್ಡಿ ದಮನಿತರ ಮೇಲೆ ಹಲ್ಲೆ ನಡೆಸುವ ಅಮಾನವೀಯ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಇಂತಹ ಆಕ್ರಮಣಗಳ ವಿರುದ್ಧ ಸಂಘಟಿತರಾಗಿ ವ್ಯಾಪಕ ಚಳುವಳಿಗಳನ್ನು ನಡೆಸುವ ಮೂಲಕ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು. ದಲಿತರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬದಲಾವಣೆ ಹೊಂದಿದಾಗ ಮಾತ್ರ ಮುಂದೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಸಮಾನತೆಯ ಚಳವಳಿಗಳ ಜೊತೆಯಲ್ಲೇ ಭೂ ಸುಧಾರಣೆಯ ಚಳವಳಿಗಳನ್ನು ಕೈಗೊಳ್ಳಬೇಕು. ಸಮಾನತೆಗಾಗಿ ಸಂಘಟಿತ ಹೋರಾಟ ಅತ್ಯವಶ್ಯಕ ಎಂದರು.
ಕೇಂದ್ರ ಸರಕಾರ ಹಿಂದುತ್ವವನ್ನು ಇತಿಹಾಸವಾಗಿ ಪರಿವರ್ತಿಸಲು ಹೊರಟಿದೆ. ಗುಜರಾತ್‌ನಲ್ಲಿ ದನದ ಚರ್ಮ ಸುಲಿಯಲು ಹೋಗಿದ್ದ ದಲಿತ ಯುವಕರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಸತ್ತ ದನದ ಮಾಲಕನೇ, ದನದ ಚರ್ಮ ಸುಲಿಯುವಂತೆ ನಾನೇ ಕೆಲಸವಹಿಸಿದ್ದು ಎಂದು ಪೊಲೀಸರಿಗೆ ತಿಳಿಸಿದರೂ, ಅದನ್ನು ಪರಿಗಣಿಸದೆ ದಲಿತ ಯುವಕರದ್ದೇ ತಪ್ಪು ಎಂದು ಬಿಂಬಿಸಲಾಗುತ್ತಿದೆ. ಒಟ್ಟಿನಲ್ಲಿ ಗೋವುಗಳ ರಕ್ಷಣೆ ಹೆಸರಿನಲ್ಲಿ ದಲಿತರ ಮೇಲೆ ಶೋಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಎರಡು ವರ್ಷದಲ್ಲಿ ದೇಶದಲ್ಲಿ ಒಟ್ಟು 39ರಿಂದ 47ಸಾವಿರದಷ್ಟು ದೌರ್ಜನ್ಯ ಪ್ರಕರಣಗಳು ಹೆಚ್ಚಿವೆ. ದೇಶಾದಾದ್ಯಂತ ಒಟ್ಟು 12.73ಲಕ್ಷ ದಲಿತ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಇದಲ್ಲಿ ಕೇವಲ 1.5ಸಾವಿರ ಪ್ರಕರಣಗಳಿಗೆ(ಶೇ.5) ಮಾತ್ರ ಶಿಕ್ಷೆಯಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಇದೆ ವೇಳೆ ವಿಚಾರ ಸಂಕಿರಣದಲ್ಲಿ ಮಾಜಿ ಶಾಸಕ ವಿ.ಜಿ.ಶ್ರೀರಾಮರೆಡ್ಡಿ, ಗೋಪಾಲಕೃಷ್ಣ ಅರಳಹಳ್ಳಿ, ನಾರಾಯಣ್‌ದಾಸ್, ಧರ್ಮೇಶ್, ಪೃಥ್ವಿ ಮತ್ತಿತರರು ಉಪಸ್ಥಿತರಿದ್ದರು.







