ಬೆಳ್ತಂಗಡಿ: ನಿಧಿಕಳ್ಳರ ತಂಡದಿಂದ ವಾಮಾಚಾರ ಶಂಕೆ

ಬೆಳ್ತಂಗಡಿ, ಜು.24: ಗೇರುಕಟ್ಟೆ ಸಮೀಪ ಕಳಿಯ ಮೇರ್ಲ ಎಂಬಲ್ಲಿ ವಾಮಾಚಾರ ಮಾಡಿ ನಿಧಿಶೋಧ ನಡೆಸಲಾಗಿದೆ ಎನ್ನಲಾಗಿದ್ದು, ಕೃತ್ಯಕ್ಕೆ ಬಳಸಿದ ವಾಮಾಚಾರದ ವಸ್ತುಗಳು ಸ್ಥಳದಲ್ಲಿ ಪತ್ತೆಯಾಗಿವೆ. ಇದೊಂದು ವ್ಯವಸ್ಥಿತ ನಿಧಿಕಳ್ಳರ ತಂಡದಿಂದ ನಡೆದ ಕೃತ್ಯವಾಗಿರಬಹುದು ಎಂದು ಅನುಮಾನಿಸಲಾಗಿದೆ.
ಸ್ಥಳೀಯ ನಿವಾಸಿ ಶಿವರಾಮ ಎಂಬವರ ಮನೆಯ ಪಕ್ಕದಲ್ಲಿರುವ ಕಾಡಿನಲ್ಲಿ ನಿಧಿಗಾಗಿ ಹುಡುಕಾಟ ನಡೆದಿರುವುದು ಕಂಡುಬಂದಿದೆ. ನಿಧಿಗಾಗಿ ಅಗೆದ ಜಾಗದ ಸುತ್ತಲು ಹರಳು, ಕುಂಕುಮ, ಕುಂಬಳಕಾಯಿ ಮುಂತಾದ ವಸ್ತುಗಳನ್ನು ಹಾಕಲಾಗಿದ್ದು ಇಲ್ಲಿಯೇ ಒಂದು ಕೋಳಿಯು ಬಲಿ ಕೊಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಿಧಿಗಾಗಿ ಅಲ್ಲಿಯೇ ಒಂದು ಹೊಂಡವನ್ನೂ ತೆಗೆಯಲಾಗಿರುವುದು ಕಂಡುಬಂದಿದೆ. ಅಲ್ಲದೆ ಸ್ಥಳದಲ್ಲಿ ಈ ಸ್ಥಳದ ಸುತ್ತ ಮುತ್ತಲಿನ ಮಾಹಿತಿ ನೀಡುವ ಒಂದು ನಕ್ಷೆ ಸಿಕ್ಕಿದೆ.
ಹೊರಗಿನಿಂದ ಬಂದ ತಂಡ ಅತ್ಯಂತ ವ್ಯವಸ್ಥಿತವಾಗಿ ಸಂಚು ರೂಪಿಸಿ ಈ ಕೃತ್ಯ ಎಸಗಿದೆ ಎನ್ನಲಾಗಿದೆ. ಎರಡು ದಿನಗಳ ಹಿಂದೆ ಯಾರೋ ಬೈಕಿನಲ್ಲಿ ಹಾಗೂ ಕಾರಿನಲ್ಲಿ ಈ ಪ್ರದೇಶಕ್ಕೆ ಬಂದು ತಿರುಗಾಡಿ ಹೋಗಿದ್ದನ್ನು ಸ್ಥಳೀಯ ಮನೆಯವರು ಕಂಡಿದ್ದು, ದಾರಿ ತಪ್ಪಿಬಂದಿರಬಹುದು ಎಂದು ತಿಳಿದು ಸುಮ್ಮನಾಗಿದ್ದರು. ಈ ಪ್ರದೇಶದಲ್ಲಿ ಹಲವಾರು ಜನರು ಓಡಾಡಿರುವ ಗುರುತುಗಳು ಕಂಡುಬಂದಿದ್ದು, ದೊಡ್ಡ ತಂಡವೇ ಬಂದಿರಬಹುದು ಎಂದು ಶಂಕಿಸಲಾಗಿದೆ.
ಈ ಬಗ್ಗೆ ಶಿವರಾಮ ಎಂಬವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದಾಗಿ ಸ್ಥಳೀಯರು ಆತಂಕಿತರಾಗಿದ್ದು ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.





