ಬಿ.ಸಿ.ರೋಡ್: ಅಪಾಯಕಾರಿಯಲ್ಲದ ಮರಕ್ಕೆ ಕೊಡಲಿ ಏಟು
ಸಾರ್ವಜನಿಕರಿಂದ ಅಸಮಾಧಾನ

ಬಂಟ್ವಾಳ, ಜು. 24: ಹಲವು ವರ್ಷಗಳಿಂದ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ನೆರಳನ್ನು ಒದಗಿಸುತ್ತಿದ್ದ ಬಿ.ಸಿ.ರೋಡಿನ ಸಾರ್ವಜನಿಕರ ರಂಗ ಮಂದಿರದ (ಈಗಿನ ನೆಮ್ಮದಿ ಕೇಂದ್ರ) ಎದುರಿನಲ್ಲಿದ್ದ ಬೃಹತ್ ಗಾತ್ರದ ಮರವನ್ನು ಕಡಿದು ಹಾಕಿರುವ ಅರಣ್ಯ ಅಧಿಕಾರಿಗಳ ಕ್ರಮ ಸಾರ್ವತ್ರಿಕ ಅಸಮಾಧಾನಕ್ಕೆ ಕಾರಣವಾಗಿದೆ.
ತಮ್ಮ ಕೆಲಸ ಕಾರ್ಯಗಳಿಗೆ ತಾಲೂಕು ಪಂಚಾಯತ್ ಕಚೇರಿಗೆ ಆಗಮಿಸುತ್ತಿದ್ದ ಜನರಿಗೆ ಹಾಗೂ ಸಾರ್ವಜನಿಕರಿಗೆ ಹಲವು ವರ್ಷಗಳಿಂದ ಈ ಮರ ನೆರಳು ನೀಡುತ್ತಿತ್ತು. ಅಲ್ಲದೆ ತಾಲೂಕು ಪಂಚಾಯತ್ ಅರ್ಜಿ ಬರವಣಿಗೆದಾರರು ಈ ಮರದ ನೆರಳಿನಲ್ಲಿ ಕುಳಿತು ಅರ್ಜಿ ಬರೆಯುತ್ತಿದ್ದರು. ಬೇಸಿಗೆ ಕಾಲದಲ್ಲಿ ವಿಶಾಲವಾಗಿ ಹರಡುತ್ತಿದ್ದ ಇದರ ನೆರಳಿನಲ್ಲಿ ವಾಹನ ಚಾಲಕರು ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದರು. ಬಹು ಉಪಯೋಗಿಯಾಗಿದ್ದ ಈ ಮರವನ್ನು ರವಿವಾರ ಅರಣ್ಯ ಅಧಿಕಾರಿಗಳು ಸಂಪೂರ್ಣವಾಗಿ ಕಡಿದು ನಿರ್ನಾಮ ಮಾಡಿದ್ದಾರೆ.
ತಾಲೂಕಿನ ರಸ್ತೆಗಳ ಬದಿಯಲ್ಲಿ ಅವಘಡಗಳನ್ನು ಎದುರು ನೋಡುತ್ತಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕೆಲಸವನ್ನು ಅರಣ್ಯ ಅಧಿಕಾರಿಗಳು ಮಾಡುತ್ತಿಲ್ಲ. ಆದರೆ ಬಿ.ಸಿ.ರೋಡಿನಲ್ಲಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನ ಸೌಧ ಕಟ್ಟಡಕ್ಕೆ ಅಡ್ಡವಾಗುವ ಏಕೈಕ ಕಾರಣದಿಂದ ಯಾವುದೇ ಅಪಾಯಕಾರಿಯಲ್ಲದ ಹಳೆ ಕಾಲದ ಈ ಮರವನ್ನು ಕಡಿದು ಉರುಳಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಬಗ್ಗೆ ದೂರವಾಣಿಯಲ್ಲಿ ಪ್ರತಿಕ್ರಿಯಿಸಿದ ಬಂಟ್ವಾಳ ತಾಲೂಕು ತಹಶೀಲ್ದಾರ್, ಮರದ ಅಪಾಯಕಾರಿ ಗೆಲ್ಲುಗಳನ್ನು ಮಾತ್ರ ಕಡಿಯುವಂತೆ ಸುಬ್ರಹ್ಮಣ್ಯ ವಲಯ ಅರಣ್ಯ ಅಧಿಕಾರಿಗಳಿಗೆ ಹೇಳಲಾಗಿತ್ತು. ಆದರೆ ತಾನು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದ ಸಭೆಯೊಂದಕ್ಕೆ ಹೋಗಿ ಮರಳುವಷ್ಟರಲ್ಲಿ ಸಂಪೂರ್ಣ ಮರವನ್ನು ಕಡಿದಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದಿದ್ದಾರೆ.







