ಗಾಂಧಿಯ ಕೊಲೆಯ ಹಿಂದೆ ಆರೆಸ್ಸೆಸ್ : ಅಳಿಯ ಅಲ್ಲ, ಮಗಳ ಗಂಡ
ಮಹಾತ್ಮಾಗಾಂಧೀಜಿಯನ್ನು ಕೊಂದಿರುವುದರಲ್ಲಿ ಆರೆಸ್ಸೆಸ್ ಪಾತ್ರವಿದೆ ಎಂದು ಕಾಂಗ್ರೆಸ್‌ನ ನಾಯಕ ರಾಹುಲ್‌ಗಾಂಧಿ ಹೇಳಿದ್ದೇ ಅಪರಾಧವಾಗಿದೆ. ಅವರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದೆ ಮಾತ್ರವಲ್ಲ, ಈ ಬಗ್ಗೆ ವಿಷಾದ ವ್ಯಕ್ತಪಡಿಸದಿದ್ದರೆ ತಮ್ಮ ವಿಚಾರಣೆಯನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಗಾಂಧಿಯ ಹತ್ಯೆಗಿಂತಲೂ ಭೀಕರವಾದುದೇನನ್ನೋ ನಮ್ಮ ನ್ಯಾಯಾಲಯ ರಾಹುಲ್‌ಗಾಂಧಿಯ ಹೇಳಿಕೆಯಲ್ಲಿ ಕಂಡಿರಬೇಕು. ಸಿಖ್ ಹತ್ಯಾಕಾಂಡಕ್ಕೆ ವಿಷಾದ ವ್ಯಕ್ತಪಡಿಸಿ ಎಂದು ರಾಜೀವ್‌ಗಾಂಧಿಯಲ್ಲಿ ಕೇಳದ ನ್ಯಾಯಾಲಯ, ಗುಜರಾತ್ ಹತ್ಯಾಕಾಂಡಕ್ಕಾಗಿ ವಿಷಾದ ವ್ಯಕ್ತಪಡಿಸಲು ನರೇಂದ್ರ ಮೋದಿಯನ್ನು ಒತ್ತಾಯ ಪಡಿಸದ ನ್ಯಾಯಾಲಯ, ಇದೀಗ ಗಾಂಧೀಜಿಯನ್ನು ಕೊಂದಿರುವುದರಲ್ಲಿ ಆರೆಸ್ಸೆಸ್ ಪಾತ್ರವಿದೆ ಎನ್ನುವುದು ವಿಷಾದ ವ್ಯಕ್ತಪಡಿಸುವುದಕ್ಕೆ ಅರ್ಹವಾದುದು ಎಂದು ಭಾವಿಸಿದೆ.
ಮಹಾತ್ಮಾಗಾಂಧೀಜಿಯ ಕಗ್ಗೊಲೆಯಲ್ಲಿ ಆರೆಸ್ಸೆಸ್‌ನ ಪಾತ್ರವೇನು ಎನ್ನುವುದು ಇಡೀ ದೇಶಕ್ಕೆ ತಿಳಿದಿದೆ. ಗಾಂಧೀಜಿಯ ಕೊಲೆಯಾದ ಬೆನ್ನಿಗೇ ಹಿಂದುತ್ವ ಸಂಘಟನೆಗಳಿಗೆ ಯಾಕೆ ನಿಷೇಧ ಹೇರಲಾಯಿತು? ಎನ್ನುವ ಒಂದು ಪ್ರಶ್ನೆ ಸಾಕು, ಗಾಂಧೀಜಿಯ ಕೊಲೆಯಲ್ಲಿ ಯಾರಿದ್ದಾರೆ ಎನ್ನುವುದನ್ನು ಸಾರಲು. ಅಂದಿನ ಗೃಹ ಸಚಿವ ವಲ್ಲಭಭಾಯಿ ಪಟೇಲ್ ಸಂಘಪರಿವಾರಕ್ಕೆ ಯಾಕೆ ನಿಷೇಧ ಹೇರಿದರು ಮತ್ತು ನಿಷೇಧ ಹಿಂದೆಗೆಯುವ ಸಂದರ್ಭದಲ್ಲಿ ವಿಧಿಸಿದ ನಿಬಂಧನೆಗಳನ್ನೆಲ್ಲ ಒಮ್ಮೆ ನೆನಪಿಸಿಕೊಂಡರೆ ಗಾಂಧಿಯ ಕೊಲೆಯ ಹಿಂದಿರುವ ಜನರು ಯಾರು ಎನ್ನುವುದು ಸ್ಪಷ್ಟವಾಗುತ್ತದೆ. ನಾಥೂರಾಂ ಗೋಡ್ಸೆಯ ಜೊತೆ ಜೊತೆಗೇ ಗಾಂಧಿ ಕೊಲೆಯ ಆರೋಪವನ್ನು ಹೊತ್ತ ಇನ್ನೊಬ್ಬ ಸಂಘಪರಿವಾರ ಮುಖಂಡರೂ ಇದ್ದಾರೆ. ಬ್ರಿಟಿಷರಿಗೆ ತಪ್ಪೊಪ್ಪಿಗೆ ಬರೆದು ಕುಖ್ಯಾತರಾಗಿದ್ದ, ಇನ್ನೆಂದೂ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾ ಗುವುದಿಲ್ಲ ಎಂದು ಅವರ ಕ್ಷಮೆಯಾಚಿಸಿದ ಸಂಘಪರಿವಾರದ ಪಾಲಿನ ಪ್ರಾತಃಸ್ಮರಣೀಯರಾಗಿರುವ ವಿನಾಯಕ ದಾಮೋದರ ಸಾವರ್ಕರ್ ಗಾಂಧೀಜಿ ಕೊಲೆಯ 6ನೆ ಆರೋಪಿಯಾಗಿದ್ದಾರೆ. ಸರಿಯಾದ ಸಾಕ್ಷಾಧಾರಗಳಿಲ್ಲದೆ ಅವರು ಬಿಡುಗಡೆಯಾದರು. ಆದರೆ ನಾಥೂರಾಂ ಗಲ್ಲುಶಿಕ್ಷೆಗೇರಿದ.
ಈ ಸಾವರ್ಕರ್ ಅವರ ಪಟ್ಟ ಶಿಷ್ಯ ನಾಥೂರಾಂ ಗೋಡ್ಸೆಯಾಗಿದ್ದಾನೆ. ಈತನಲ್ಲಿ ಉಗ್ರವಾದಿ ಆಲೋಚನೆಗಳನ್ನು ತುಂಬಿದ್ದು, ಮಹಾತ್ಮಾಗಾಂಧೀಜಿಯನ್ನು ಕೊಂದು ಹಾಕಲು ಈತನನ್ನು ಸಿದ್ಧಪಡಿಸಿದ್ದು ಸಂಘಪರಿವಾರ ಚಿಂತನೆಗಳೇ ಆಗಿವೆ. ಇದನ್ನು ಯಾರೂ ನಿರಾಕರಿಸಲಾಗುವುದಿಲ್ಲ. ಈಗ ಭಾರತದಲ್ಲಿ ಭಯೋತ್ಪಾದನೆಯ ಹೆಸರಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿರುವ ಕೇಸರಿ ಉಗ್ರ ಸಂಘಟನೆ ‘ಅಭಿನವ ಭಾರತ’ದ ಬೀಜವನ್ನು ಬಿತ್ತಿದವರು ವಿನಾಯಕ ದಾಮೋದರ ಸಾವರ್ಕರ್. ನಾಥೂರಾಂ ಗೋಡ್ಸೆ ಈ ವಿನಾಯಕ ದಾಮೋದರ ಸಾವರ್ಕರ್‌ರ ವಿಷದ ಹಾಲನ್ನು ಉಂಡು ಬೆಳೆದವನು. ಅಂದ ಮೇಲೆ ಆತ ವಿಷವನ್ನಲ್ಲದೆ, ಅಮೃತವನ್ನು ಕಕ್ಕಲು ಸಾಧ್ಯವೇ?
ಈ ನಿಟ್ಟಿನಲ್ಲಿ ಆರೆಸ್ಸೆಸ್ ದ್ವಂದ್ವವನ್ನು ಹಿಂದೂ ಮಹಾ ಸಭಾ ಟಿಕಿಸಿದೆ. ಮತ್ತು ಆತನಿಗೂ ತನಗೂ ಇರುವ ಸಂಬಂಧವನ್ನೂ ಒಪ್ಪಿಕೊಂಡಿದೆ. ಆರೆಸ್ಸೆಸ್ ಇದೇ ಹಿಂದೂ ಮಹಾಸಭಾದ ಭಾಗವಾಗಿತ್ತು ಎನ್ನುವುದರಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲ. ನಾಥೂರಾಂ ಗೋಡ್ಸೆ ನಡೆಸಿದ ಕೃತ್ಯ ತನ್ನ ಕುತ್ತಿಗೆಗೆ ಸುತ್ತಿಕೊಳ್ಳುವುದು ಬೇಡ ಎನ್ನುವ ಕಾರಣಕ್ಕಾಗಿ ಅದು ಹಿಂದೂ ಮಹಾಸಭಾ ಜೊತೆಗೆ ನಂಟನ್ನು ಕಡಿದುಕೊಂಡಿತಾದರೂ, ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾದ ನಡುವಿನ ಸಿದ್ಧಾಂತದಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ. ಗಾಂಧೀಜಿಯ ಕೊಲೆ ನಡೆದಾಗಲೇ ಈ ಉಗ್ರವಾದಿ ಸಂಘಟನೆಗಳನ್ನು ಚಿವುಟಿ ಹಾಕಿದ್ದಿದ್ದರೆ ಇಂದು ಆರೆಸ್ಸೆಸ್ ಈ ಪರಿಯಾಗಿ ಬೆಳೆದು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಸವಾಲಾಗುತ್ತಿರಲಿಲ್ಲ.
ಇಂದು ದಲಿತರು, ಮುಸ್ಲಿಮರು, ಅಲ್ಪಸಂಖ್ಯಾತರು, ಕೆಳಜಾತಿಯ ಜನರು ಇವರಿಂದ ದಮನಕ್ಕೊಳಗಾಗುತ್ತಿರಲಿಲ್ಲ. ಕಾಂಗ್ರೆಸ್‌ನೊಳಗಿದ್ದ ಕೆಲವು ನಾಯಕರ ಮೃದು ಹಿಂದುತ್ವ ನೀತಿಯೇ ಆರೆಸ್ಸೆಸ್‌ನ್ನು ಉಳಿಸಿ ಬೆಳೆಸಿತು. ನಾಥೂರಾಂ ಗೋಡ್ಸೆ ಗಾಂಧೀಜಿಯನ್ನು ಹತ್ಯೆಗೈದಾಗ ಆರೆಸ್ಸೆಸ್‌ನ ಹೆಸರು ಬೇರೆ ಇದ್ದಿರಬಹುದು. ಅಳಿಯ ಅಲ್ಲ ಮಗಳ ಗಂಡ ಎಂದಾಕ್ಷಣ ಬದಲಾವಣೆಯೇನಾದರೂ ಆಗುತ್ತದೆಯೇ? ಹೆಸರಷ್ಟೇ ಬೇರೆ, ಸಿದ್ಧಾಂತ ಒಂದೇ ಆದ ಮೇಲೆ ಹಿಂದೂ ಮಹಾಸಭಾ ಎಂದು ಕರೆದರೇನು, ಆರೆಸ್ಸೆಸ್ ಎಂದು ಕರೆದರೇನು? ಇದರಲ್ಲಿ ಯಾವ ವ್ಯತ್ಯಾಸವು ಇಲ್ಲ. ಈ ಕುರಿತಂತೆ ದೇಶದ ಜನರಿಗೆ ಯಾವುದೇ ಅನುಮಾನವೂ ಇಲ್ಲ. ದುರದೃಷ್ಟವಶಾತ್ ಗಾಂಧೀಜಿಯ ಕೊಲೆಯಲ್ಲಿ ಆರೆಸ್ಸೆಸ್ ಪಾತ್ರವಿದೆ ಎನ್ನುವುದು ನ್ಯಾಯಾಲಯಕ್ಕೆ ಸರಿಕಂಡಿಲ್ಲ. ಇದೇ ಸಂದರ್ಭದಲ್ಲಿ ಹಿಂದೂ ಸಭಾದ ಮುಖಂಡರು ಕಳೆದ ಬಾರಿ ಗಾಂಧೀಜಿಯನ್ನು ಕೊಂದ ಭಯೋತ್ಪಾದಕ ನಾಥೂರಾಂ ಗೋಡ್ಸೆ ಹತ್ಯೆಯಾದ ದಿನವನ್ನು ಆಚರಿಸಿದರು.
ಇದು ದೇಶದ ಪ್ರಜಾಸತ್ತೆಯ ಪಾಲಿಗೆ ಅಪಾಯಕಾರಿ ಎಂದು ನ್ಯಾಯಾಲಯಕ್ಕೆ ಅನ್ನಿಸಲಿಲ್ಲ. ಅಷ್ಟೇ ಅಲ್ಲ, ಕೆಲವೆಡೆ ನಾಥೂರಾಂ ಗೋಡ್ಸೆಯ ದೇವಸ್ಥಾನವನ್ನು ನಿರ್ಮಿಸುವ ಬಗ್ಗೆಯೂ ಸಂಘ ಪರಿವಾರದ ಮುಖಂಡರು ಮುಂದಾಗಿದ್ದರು. ಇವರ ವಿರುದ್ಧ ಸ್ವಯಂ ದೂರು ದಾಖಲಿಸಿ ಕ್ರಮ ತೆಗೆದುಕೊಳ್ಳುವುದಕ್ಕೆ ಆದೇಶ ನೀಡುವುದು ನ್ಯಾಯಾಲಯದ ಕರ್ತವ್ಯ. ಆದರೆ ಅಂತಹದೇನೂ ಈವರೆಗೆ ನಡೆಯಲಿಲ್ಲ. ಆದರೆ ನಾಥೂರಾಂ ಗೋಡ್ಸೆಯನ್ನು ಬೆಳೆಸಿ, ಆತನಿಂದ ಈ ದೇಶದ ಅತ್ಯಂತ ಶ್ರೇಷ್ಠ ವ್ಯಕ್ತಿಯನ್ನು ಕೊಲ್ಲಿಸಿದ ಸಂಘಟನೆಯ ಮಾನಾಪಮಾನದ ಬಗ್ಗೆ ನಮ್ಮ ನ್ಯಾಯಾಲಯ ಇದೀಗ ಚಿಂತಿಸುವ ಮಟ್ಟಕ್ಕೆ ಬಂದಿದೆ. ಇದೊಂದು ರೀತಿಯಲ್ಲಿ ದನದ ಮಾಂಸ ತಿಂದ ಆರೋಪದಲ್ಲಿ ಕೊಲೆಗೀಡಾದ ಅಖ್ಲಾಕ್‌ನ ಕತೆಯಂತೆಯೇ ಆಗಿದೆ.
ಅಖ್ಲಾಕ್ ಅವರನ್ನು ಕೊಲೆಗೈದ ಎಲ್ಲ ದುಷ್ಕರ್ಮಿ ಗಳ ವಿರುದ್ಧ ದೂರು ದಾಖಲಿಸಿ ಅವರನ್ನು ನೇಣಿಗೇರಿಸಬೇಕಾದ ನ್ಯಾಯಾಲಯ, ಮೃತ ಅಖ್ಲಾಕ್‌ನ ಮೇಲೆಯೇ ಪ್ರಕರಣ ದಾಖಲಿಸಿದಂತೆ. ಗಾಂಧೀಜಿಯನ್ನು ಕೊಂದಿರುವ ಗೋಡ್ಸೆಗೂ ನನಗೂ ನೇರ ಸಂಬಂಧವಿದೆ ಎಂದು ಹಿಂದೂ ಮಹಾ ಸಭಾ ಗಂಟಾಘೋಷವಾಗಿ ಹೇಳುತ್ತಿದ್ದರೂ ಆ ಬಗ್ಗೆ ಯಾವುದೇ ಕ್ರಮವಿಲ್ಲ. ಇದೇ ಸಂದರ್ಭದಲ್ಲಿ ಗೋಡ್ಸೆಯನ್ನು ಬೆಳೆಸಿದ ವಿಷ ಸಿದ್ಧಾಂತದ ಕಡೆಗೆ ಬೊಟ್ಟು ತೋರಿಸುವುದು ಅಪರಾಧವೆನ್ನುವ ಸ್ಥಿತಿಯಲ್ಲಿ ನಾವಿದ್ದೇವೆ. ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ರಾಹುಲ್‌ಗಾಂಧಿ ಹೇಳಿದ್ದಾರೆ. ನಿಜ. ಇಂದು ನಾವು ವಿಷಾದ ವ್ಯಕ್ತಪಡಿಸಬೇಕಾಗಿರುವುದು, ಅದೇ ಆರೆಸ್ಸೆಸ್‌ನ ಸಿದ್ಧಾಂತವನ್ನು ಮೈಗೂಡಿಸಿ ಮುಸ್ಲಿಮರ ಹತ್ಯೆಗೈಯುವವರ ಕುರಿತಂತೆ, ದಲಿತರ ಮೇಲೆ ಹಲ್ಲೆ ನಡೆಸುವವರ ಕುರಿತಂತೆ. ಈ ಬಗ್ಗೆ ನಮ್ಮ ಕಾನೂನು, ನ್ಯಾಯ ವ್ಯವಸ್ಥೆ ಅಸಹಾಯಕವಾಗಿರುವ ಕುರಿತಂತೆ ವಿಷಾದ ವ್ಯಕ್ತಪಡಿಸಬೇಕಾಗಿದೆ.







