ರಾಯಿ ಗ್ರಾಮ ಪಂಚಾಯತ್ ಸಭೆ: ರಾಯಿ-ಪುಂಚೋಡಿ ರಸ್ತೆ ಸಂಪರ್ಕಕ್ಕೆ ಆಗ್ರಹ

ಬಂಟ್ವಾಳ, ಜು. 24: ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈತ್ರೋಡಿ ರಸ್ತೆ ತೀರಾ ಹದಗೆಟ್ಟಿದ್ದು, ಇದಕ್ಕಾಗಿ ರಾಯಿ-ಪುಂಚೋಡಿ ಸಂಪರ್ಕ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇಲ್ಲಿನ ರಾಯಿ ಗ್ರಾಮ ಪಂಚಾಯತ್‌ನಲ್ಲಿ ಗ್ರಾಪಂ ಅಧ್ಯಕ್ಷ ಬಿ.ದಯಾನಂದ ಸಫಲ್ಯ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಪ್ರಥಮ ಹಂತದ ಗ್ರಾಮಸಬೆಯಲ್ಲಿ ಈ ಆಗ್ರಹ ಕೇಳಿ ಬಂದಿದೆ.
ಈ ಪ್ರದೇಶದಲ್ಲಿ ವಿದ್ಯುತ್ ಮೀಟರ್ ರೀಡಿಂಗ್ ನಡೆಸದೆ ದುಪ್ಪಟ್ಟು ವಿದ್ಯುತ್ ಬಿಲ್ ರವಾನಿಸುವ ಮೂಲಕ ಮೆಸ್ಕಾಂ ಗ್ರಾಹಕರನ್ನು ಸತಾಯಿಸುತ್ತಿದೆ ಎಂದು ಸ್ಥಳೀಯ ನಿವಾಸಿ ಅನಂತ್ ರಾವ್ ಮತ್ತಿತರರು ಆರೋಪಿಸಿದರು. ರಾಯಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೂರ್ಣಕಾಲಿಕ ವೈದ್ಯರನ್ನು ನೇಮಿಸಬೇಕು. ಕೊಲ ಸಾರ್ವಜನಿಕ ರಸ್ತೆಗೆ ಅಡ್ಡಿಯಾಗಿರುವ ಹಳೆ ಬಸ್ ತಂಗುದಾಣ ತೆರವುಗೊಳಿಸಬೇಕೆಂದು ಸ್ಥಳೀಯ ನಿವಾಸಿ ಸಿರಿಲ್ ಕಾರ್ಲೊ ಆಗ್ರಹಿಸಿದರು.
ಇಲ್ಲಿನ ಅಣ್ಣಳಿಕೆ ಎಂಬಲ್ಲಿ 2.20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸಾರ್ವಜನಿಕ ಶೌಚಾಲಯ ಇನ್ನೂ ಸಾರ್ವಜನಿಕರ ಉಪಯೋಗಕ್ಕೆ ಲ್ಯವಾಗಿಲ್ಲ. ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವಂತೆ ಸ್ಥಳೀಯ ನಿವಾಸಿ ರಾಮಚಂದ್ರ ಶೆಟ್ಟಿಗಾರ್ ಒತ್ತಾಯಿಸಿದರು. ಇದೇ ವೇಳೆ ಮಂಗಳೂರಿಗೆ ವರ್ಗಾವಣೆಗೊಂಡ ಇಲ್ಲಿನ ಗ್ರಾಮ ಲೆಕ್ಕಾಧಿಕಾರಿ ಪವಿತ್ರಾರನ್ನು ಸಮ್ಮಾನಿಸಲಾಯಿತು. ಬಂಟ್ವಾಳ ಕೃಷಿ ಅಧಿಕಾರಿ ನಾರಾಯಣ ಶೆಟ್ಟಿ ಅವರು ನೋಡಲ್ ಅಧಿಕಾರಿಯಾಗಿ ಬಾಗವಹಿಸಿದ್ದರು.
ಸ್ಥಳೀಯ ತಾಪಂ ಸದಸ್ಯೆ ಮಂಜುಳಾ, ಗ್ರಾಪಂ ಉಪಾಧ್ಯಕ್ಷೆ ಪುಷ್ಪಲತಾ, ಸದಸ್ಯರಾದ ಹರೀಶ್ ಆಚಾರ್ಯ, ರಾಘವ ಅಮೀನ್, ಪದ್ಮನಾಭ ಗೌಡ, ನಿರುಪಮಾ ಎಸ್., ಯಶೋಧಾ, ಕುಸುಮಾ, ಜಗದೀಶ, ಶೋಭಾ, ಪಿಡಿಒ ವೆಂಕಟೇಶ್ ಸಹಿತ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ವೇಳೆ ಅರಣ್ಯ ಇಲಾಖೆ ವತಿಯಿಂದ ಉಚಿತ ಸಸಿ ವಿತರಿಸಲಾಯಿತು. ಉದ್ಯೋಗ ಖಾತರಿ ಯೋಜನೆ ಬಗ್ಗೆ ಸಂಪನ್ಮೂಲ ವ್ಯಕ್ತಿ ಜಯರಾಜ್ ಮತ್ತು ದಯಾವತಿ ಮಾಹಿತಿ ನೀಡಿದರು.







