ಇಬ್ಬರು ನ್ಯಾಯಮೂರ್ತಿಗಳ ವರ್ಗಾವಣೆಗೆ ಕೊಲಿಜಿಯಂ ಶಿಫಾರಸು
ಹೊಸದಿಲ್ಲಿ, ಜು.24: ರಾಜಸ್ಥಾನ ಹೈಕೋರ್ಟ್‌ನಿಂದ ಇಬ್ಬರು ನ್ಯಾಯಮೂರ್ತಿಗಳನ್ನು ಪಂಜಾಬ್-ಹರಿಯಾಣ ಹೈಕೋರ್ಟ್‌ಗೆ ಮರು ವರ್ಗಾವಣೆ ಮಾಡಲು ಸುಪ್ರೀಂಕೋರ್ಟ್‌ನ ಕೊಲಿಜಿಯಂ ಶಿಫಾರಸು ಮಾಡಿದೆಯೆಂದು ತಿಳಿದುಬಂದಿದೆ.
ಒಂದೇ ಹೈಕೋರ್ಟ್‌ನ ಆನೇಕ ನ್ಯಾಯಮೂರ್ತಿಗಳನ್ನು ಇನ್ನೊಂದು ಹೈಕೋರ್ಟ್‌ಗೆ ವರ್ಗಾವಣೆ ಮಾಡುವುದು ಸರಿಯಲ್ಲವೆಂದು ಕೇಂದ್ರ ಸರಕಾರ ಹೇಳಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆಯೆನ್ನಲಾಗಿದೆ.
ನ್ಯಾಯಮೂರ್ತಿಗಳಾದ ಜೈಶ್ರೀ ಠಾಕೂರ್ ಹಾಗೂ ಅನೂಪಿಂದರ್ ಸಿಂಗ್ ಗ್ರೆವಾಲ್‌ರನ್ನು ಬಾರ್‌ನಿಂದ ನ್ಯಾಯಮೂರ್ತಿಗಳಾಗಿ ಭಡ್ತಿ ಪಡೆದೊಡನೆಯೇ ಪಂಜಾಬ್-ಹರಿಯಾಣ ಹೈಕೋರ್ಟ್‌ನಿಂದ ರಾಜಸ್ಥಾನಕ್ಕೆ ವರ್ಗಾವಣೆ ಮಾಡಲಾಗಿತ್ತು.ಅದರಿಂದಾಗಿ ರಾಜಸ್ಥಾನ ಹೈಕೋರ್ಟ್‌ನಲ್ಲಿ ಪಂಜಾಬ್-ಹರ್ಯಾಣ ಹೈಕೋರ್ಟ್‌ನಿಂದ ವರ್ಗವಾದ ನ್ಯಾಯಮೂರ್ತಿಗಳ ಸಂಖ್ಯೆ 5ಕ್ಕೇರಿತ್ತು.
ನ್ಯಾಯಮೂರ್ತಿಗಳಾದ ಕನ್ವಲ್ಜಿತ್ ಸಿಂಗ್ ಅಹ್ಲುವಾಲಿಯ, ಸಬಿನಾ ಹಾಗೂ ನಿರ್ಮಲ್ಜಿತ್ ಸಿಂಗ್ ಕೌರ್ ಪಂಜಾಬ್-ಹರ್ಯಾಣ ಹೈಕೋರ್ಟ್‌ನಿಂದ ರಾಜಸ್ಥಾನ ಹೈಕೋರ್ಟ್‌ಗೆ ನೇಮಕಗೊಂಡಿದ್ದ ಇತರರಾಗಿದ್ದಾರೆ.
ಒಂದೇ ಹೈಕೋರ್ಟ್‌ನಿಂದ ಇಷ್ಟೊಂದು ಸಂಖ್ಯೆಯ ನ್ಯಾಯಮೂರ್ತಿಗಳನ್ನು ಇನ್ನೊಂದು ಹೈಕೋರ್ಟ್‌ಗೆ ನೇಮಿಸುವುದು ಸರಿಯಲ್ಲವೆಂದು ಕೇಂದ್ರ ಸರಕಾರವು ಕೆಲವು ತಿಂಗಳ ಹಿಂದೆ ಸುಪ್ರೀಂಕೋರ್ಟ್‌ನ ಕೊಲಿಜಿಯಂಗೆ ಸೂಚಿಸಿತ್ತೆಂದು ಸರಕಾರಿ ಮೂಲಗಳು ತಿಳಿಸಿವೆ.
ಠಾಕೂರ್ ಹಾಗೂ ಗೈವಾಲ್‌ರನ್ನು ಹಂಗಾಮಿಯಿಂದ ಕಾಯಂ ನ್ಯಾಯಮೂರ್ತಿಗಳಾಗಿ ಭಡ್ತಿ ಮಾಡಲು ಕೊಲಿಜಿಯಂ ಶಿಫಾರಸು ಮಾಡಿದ ವೇಳೆ, ಅವರನ್ನು ಭಡ್ತಿಗೊಳಿಸಿದ ಬಳಿಕ ಕ್ರಮ ಕೈಗೊಳ್ಳುವೆನೆಂದು ಸರಕಾರಕ್ಕೆ ಮಾಹಿತಿ ನೀಡಿತ್ತು.





