ಮುಷ್ಕರ ಎಷ್ಟು ಸರಿ?
ಮಾನ್ಯರೆ,
ಇದೀಗ ರಾಜ್ಯ ಸರಕಾರದ ವಿರುದ್ಧ ಕೆಎಸ್ಸಾರ್ಟಿಸಿ ನೌಕರರು ಪ್ರತಿಭಟನೆಗೆ ಇಳಿದಿದ್ದಾರೆ. ಆದರೆ ಈ ಪ್ರತಿಭಟನೆ ಎಷ್ಟರಮಟ್ಟಿಗೆ ನ್ಯಾಯಯುತವಾದುದು ಎನ್ನುವುದು ಚರ್ಚೆಯ ವಿಷಯವಾಗಿದೆ. ಇಂದು ಸಾರಿಗೆ ಬಸ್‌ಗಳು ಸರಕಾರದ ಸೌಲಭ್ಯಗಳನ್ನು ಉಣ್ಣುತ್ತಲೇ ಸರಕಾರಕ್ಕೆ ಅಂದರೆ ಜನರಿಗೆ ಮಾಡುವ ದ್ರೋಹ ಸದಾ ಮಾಧ್ಯಮಗಳಲ್ಲಿ ವರದಿಯಾಗುತ್ತಾ ಇರುತ್ತವೆ. ಇಲ್ಲಿನ ಸಿಬ್ಬಂದಿಗಯಿಂದಾಗಿ ಭಾರೀ ಪ್ರಮಾಣದ ಹಣ ಪೋಲಾಗುತ್ತಿದೆ. ಇದನ್ನು ತಡೆದರೆ ಆ ಹಣದಿಂದಲೇ ಸಿಬ್ಬಂದಿಯ ಸಂಬಳವನ್ನು ಹೆಚ್ಚಿಸಬಹುದು. ಹಾಗೆಯೇ ಖಾಸಗಿ ಬಸ್‌ಗಳ ಜೊತೆಗೆ ಪರೋಕ್ಷ ಒಪ್ಪಂದ ಮಾಡಿಕೊಂಡು ಕೆಲವು ಸಿಬ್ಬಂದಿಗಳು ಹಣ ಜೇಬಿಗಿಳಿಸುವ ಕುರಿತಂತೆ ಆರೋಪಗಳೂ ಇವೆ.
ವಿದ್ಯಾರ್ಥಿಗಳ ಜೊತೆಗೆ ಈ ಸಾರಿಗೆ ಬಸ್ ಸಿಬ್ಬಂದಿ ಕೆಟ್ಟದಾಗಿ ವರ್ತಿಸುತ್ತಾ ಸುದ್ದಿಯಾಗುತ್ತಾರೆ. ಅದೇನೋ, ಇವರಿಗೆ ವಿದ್ಯಾರ್ಥಿಗಳನ್ನು ಕಂಡರೆ ಅಸಹನೆ. ವಿದ್ಯಾರ್ಥಿಗಳು ಹಣ ಕೊಡುವುದಿಲ್ಲ, ಪಾಸ್ ತೋರಿಸುತ್ತಾರೆ ಎನ್ನುವುದು ಇವರ ಅಸಹನೆಗೆ ಕಾರಣವಾಗಿರಬಹುದು. ಬಸ್‌ಗಳಲ್ಲಿ ಧಾರ್ಮಿಕ ಫೋಟೊಗಳನ್ನು ಇಟ್ಟು ಮಿನಿ ದೇವಸ್ಥಾನವಾಗಿಸುವುದು, ಗ್ರಾಮೀಣ ಜನರ ಜೊತೆಗೆ ಕ್ರೂರವಾಗಿ ವರ್ತಿಸುವುದು ಇವರ ಸೇವೆಯ ಹೆಗ್ಗಳಿಕೆಗಳಲ್ಲಿ ಕೆಲವು. ಮೊತ್ತ ಮೊದಲು ಸಿಬ್ಬಂದಿ ತಮ್ಮನ್ನು ತಾವು ತಿದ್ದಿಕೊಳ್ಳಲಿ. ಬಳಿಕ, ಸರಕಾರದಿಂದ ಹೆಚ್ಚಿನ ಸವಲತ್ತನ್ನು ಕೇಳಲಿ. ತಮ್ಮ ಸ್ವಾರ್ಥಕ್ಕಾಗಿ ಜನಸಾಮಾನ್ಯರ ಬದುಕನ್ನು ಬಲಿ ಮಾಡುವುದು ಇವರಿಗೆ ಯಾವ ರೀತಿಯಲ್ಲೂ ಶೋಭೆಯಲ್ಲ. ಈಗಾಗಲೇ ದೇಶದ ವಿವಿಧ ಸಾರ್ವಜನಿಕ ಸಂಸ್ಥೆಗಳ ಮೇಲೆ ಖಾಸಗಿಗಳ ಕಣ್ಣು ಬಿದ್ದಿವೆೆ. ಹೀಗೇ ಆದರೆ ಮುಂದೊಂದು ದಿನ, ಈ ಸಂಸ್ಥೆಯನ್ನೂ ಖಾಸಗಿಯವರು ಆಪೋಷನ ತೆಗೆದುಕೊಳ್ಳುವುದರಲ್ಲಿ ಸಂಶಯವಿಲ್ಲ.







