ಹತ್ಯೆಗೆ ಯತ್ನ ಆರೋಪ: ಆಪ್ ಶಾಸಕ ಬಂಧನ
ಹೊಸದಿಲ್ಲಿ, ಜು.24: ವಿದ್ಯುತ್ ಸಮಸ್ಯೆ ಬಗ್ಗೆ ಅಹವಾಲು ಸಲ್ಲಿಸಲು ಶಾಸಕರ ನಿವಾಸಕ್ಕೆ ಹೋಗಿದ್ದ ತನ್ನನ್ನು ಕೊಲ್ಲಲು ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಪ್ರಯತ್ನಿಸಿದ್ದಾರೆ ಎಂದು ಮಹಿಳೆಯರೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಶಾಸಕ ಖಾನ್ ಅವರನ್ನು ಬಂಧಿಸಲಾಗಿದೆ.
ದಿಲ್ಲಿಯಲ್ಲಿ ಬಂಧನಕ್ಕೆ ಒಳಗಾಗುತ್ತಿರುವ ಆಮ್ ಆದ್ಮಿ ಪಕ್ಷದ ಹತ್ತನೆ ಶಾಸಕ ಇವರಾಗಿದ್ದಾರೆ. ಮೊದಲು ಶಾಸಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಯಿತು. ಆ ಬಳಿಕ ಅವರನ್ನು ಬಂಧಿಸಲಾಯಿತು. ತಮ್ಮ ವಿರುದ್ಧ ಸುಳ್ಳು ಹೇಳಿಕೆ ನೀಡಲು ಪೊಲೀಸರು ಮಹಿಳೆಯ ಮೇಲೆ ಒತ್ತಡ ತಂದಿದ್ದಾರೆ ಎಂದು ಖಾನ್ ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದ ಮರುದಿನವೇ ಶಾಸಕರನ್ನು ಬಂಧಿಸಲಾಗಿದೆ.
ಜುಲೈ 22ರಂದು ಮಹಿಳೆ ಮ್ಯಾಜಿಸ್ಟ್ರೇಟರ ಮುಂದೆ ಅಪರಾಧ ದಂಡ ಸಂಹಿತೆಯ ಸೆಕ್ಷನ್ 164ರ ಅನ್ವಯ ಹೇಳಿಕೆ ದಾಖಲಿಸಿದ್ದರು. ಶಾಸಕರ ಮನೆಯಿಂದ ತಾನು ಮರಳುತ್ತಿದ್ದಾಗ, ವಾಹನವೊಂದರ ಅಡಿಗೆ ಹಾಕಿ ನನ್ನನ್ನು ಹತ್ಯೆ ಮಾಡಲು ಪ್ರಯತ್ನಿಸಲಾಯಿತು. ಈ ವಾಹನದಲ್ಲಿ ಶಾಸಕ ಅಮಾನತುಲ್ಲಾ ಖಾನ್ ಇದ್ದರು ಎಂದು ಮಹಿಳೆ ಹೇಳಿಕೆ ನೀಡಿದ್ದಾರೆ. ದಿಲ್ಲಿಯ ಆಗ್ನೇಯ ವಲಯದ ಜಂಟಿ ಆಯುಕ್ತ ಆರ್.ಪಿ.ಉಪಾಧ್ಯಾಯ ಈ ವಿಷಯ ಪ್ರಕಟಿಸಿದ್ದಾರೆ.
ಇದಕ್ಕೂ ಮುನ್ನ ಈ ತಿಂಗಳ 19ರಂದು ಅವರು ಪೊಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಜಾಮಿಯಾ ನಗರದಲ್ಲಿರುವ ಆಪ್ ಶಾಸಕರ ಮನೆಯಲ್ಲಿ ಯುವಕನೊಬ್ಬ ತನ್ನನ್ನು ಜುಲೈ 10ರಂದು ನಿಂದಿಸಿದ್ದಲ್ಲದೇ, ವಿದ್ಯುತ್ ಸಮಸ್ಯೆ ವಿಚಾರವನ್ನು ರಾಜಕೀಯಗೊಳಿಸುವುದನ್ನು ನಿಲ್ಲಿಸದಿದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿದ್ದರು. ಈ ಬಗ್ಗೆ ಎಫ್‌ಐಆರ್ ದಾಖಲಾಗಿತ್ತು.
ಮ್ಯಾಜಿಸ್ಟ್ರೇಟ್ ಮುಂದೆ ಆಕೆ ಹೇಳಿಕೆ ನೀಡಿದ ಬಳಿಕ, ಭಾರತೀಯ ದಂಡಸಂಹಿತೆಯ ಸೆಕ್ಷನ್ 308 (ಕೊಲೆ ಯತ್ನ) ಅನ್ನು ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.





