ಕೆಎಸ್ಸಾರ್ಟಿಸಿ ಬಸ್ ಮುಷ್ಕರ: ಬೆಳ್ತಂಗಡಿಯಲ್ಲಿ ಜನಜೀವನ ಅಸ್ತವ್ಯಸ್ತ

ಬೆಳ್ತಂಗಡಿ, ಜು.25: ರಾಜ್ಯ ಸಾರಿಗೆ ಸಂಸ್ಥೆಯ ನೌಕರರ ಸಂಘ ಕರೆನೀಡಿರುವ ಸಾರಿಗೆ ಮುಷ್ಕರದಿಂದಾಗಿ ತಾಲೂಕಿನಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಗ್ರಾಮೀಣ ಪ್ರದೇಶಗಳ ಏಕೈಕ ಸಂಪರ್ಕ ವ್ಯವಸ್ಥೆಯಾಗಿದ್ದ ಸಾರಿಗೆ ಸಂಸ್ಥೆಯ ಬಸ್‌ಗಳು ಬಾರದ ಹಿನ್ನಲೆಯಲ್ಲಿ ಜನರು ಪೇಟೆಗೆ ಬರಲು ಪರದಾಡುವಂತಾಗಿದೆ.
ಧರ್ಮಸ್ಥಳದ ರಾಜ್ಯ ಸಾರಿಗೆ ಸಂಸ್ಥೆಯ ಡಿಪೊದಲ್ಲಿ ಬಸ್‌ಗಳು ಸಾಲಾಗಿ ನಿಂತಿದ್ದು ನೌಕರರು ಬಸ್‌ಗಳಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಶಾಲಾ ಕಾಲೇಜುಗಳಿಗೆ ರಜೆ ನೀಡದಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಶಾಲೆಗಳಿಗೆ ಬರಲು ಪರದಾಡುವ ದೃಶ್ಯ ಸಾಮಾನ್ಯವಾಗಿತ್ತು. ತಾಲೂಕಿನ ಬಹುತೇಕ ಪ್ರದೇಶಗಳ ವಿದ್ಯಾರ್ಥಿಗಳು ಸರಕಾರಿ ಬಸ್‌ಗಳನ್ನೇ ಅವಲಂಬಸಿದ್ದು ಬಸ್ ಬಾರದ ಹಿನ್ನಲೆಯಲ್ಲಿ ಮಕ್ಕಳು ಅಲ್ಲಲ್ಲಿ ರಸ್ತೆ ಬದಿಯಲ್ಲಿ ಕಾಯುತ್ತಿದ್ದರು. ಕೆಲವರು ಖಾಸಗಿ ವಾಹನಗಳನ್ನು ಅವಲಂಬಿಸಿದರು. ಆದರೆ ಇಷ್ಟು ಮಕ್ಕಳನ್ನು ಸಾಗಿಸಲು ಅವರಿಗೂ ಶಕ್ತಿಯಿಲ್ಲವಾಗಿದೆ.
ಕೆಲ ಸರ್ವೀಸ್ ವಾಹನಗಳು ಮಕ್ಕಳನ್ನು ಹತ್ತಿಸದೆ ಹೋಗುತ್ತಿದ್ದರು. ಗ್ರಾಮಗಳಿಂದ ಸಿಕ್ಕಿದ ವಾಹನಗಳಲ್ಲಿ ಬಂದವರು ಅಲ್ಲಿಂದ ಮುಂದೆ ಕಾಲೇಜುಗಳಿಗೆ ಹೋಗದೆ ವಾಹನಗಳಿಲ್ಲದೆ ಪರದಾಡಿದರು. ಕೆಲವು ಖಾಸಗಿ ಶಾಲೆಗಳಲ್ಲಿ ಪರೀಕ್ಷೆಗಳು ನಿಗದಿಯಾಗಿದ್ದು ಮಕ್ಕಳ ಆತಂಕವನ್ನು ಇನ್ನಷ್ಟು ಹೆಚ್ಚಿಸುವಂತಾಗಿದೆ. ಒಟ್ಟಾರೆಯಾಗಿ ಬಸ್ ಮುಷ್ಕರ ಹಾಗೂ ಶಾಲೆಗಳಿಗೆ ರಜೆ ನೀಡದಿರುವ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶಗಳ ಬಡವರ ಮನೆಯ ಮಕ್ಕಳೇ ಹೆಚ್ಚು ಕಷ್ಟ ಪಡಬೇಕಾಗಿ ಬಂದುದು ವಿಶೇಷ.
ಬಸ್‌ಗಳು ಓಡಾಟ ನಡೆಸದ ಹಿನ್ನಲೆಯಲ್ಲಿ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳ ನೌಕರರು ಕಚೇರಿಗಳಿಗೆ ಹೋಗಲು ಪರದಾಡುತ್ತಿದ್ದುದು ಕಂಡು ಬಂತು. ಮುಷ್ಕರದ ಹಿನ್ನಲೆಯಲ್ಲಿ ಖಾಸಗಿ ಜೀಪುಗಳು ಟೆಂಪೋಗಳು ರಿಕ್ಷಾಗಳಲ್ಲಿ ಜನರನ್ನು ತುಂಬಿಕೊಂಡು ಓಡಾಡುತ್ತಿವೆ. ಹಾಗೂ ಸಿಕ್ಕ ಅವಕಾಶದ ಸದುಪಯೋಗ ಪಡೆದುಕೊಂಡು ಮನ ಬಂದಂತೆ ದರ ವಸೂಲಿ ಮಾಡಲಾಗುತ್ತಿದೆ. ಪ್ರಮುಖ ಸ್ಥಳಗಳಲ್ಲಿ ಪೋಲೀಸರನ್ನು ನಿಯೋಜಿಸಲಾಗಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿಲಾಗಿದೆ.







