ಕೆಎಸ್ಸಾರ್ಟಿಸಿ ಬಸ್ ಮುಷ್ಕರ: ಪುತ್ತೂರು ವ್ಯಾಪ್ತಿಯ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ

ಪುತ್ತೂರು, ಜು.25: ರಾಜ್ಯ ಸಾರಿಗೆ ಸಂಸ್ಥೆಯ ವಿವಿಧ ಸಂಘಟನೆಗಳು ನೀಡಿರುವ ಬಂದ್ ಕರೆಯಿಮದಾಗಿ ಪುತ್ತೂರು ತಾಲೂಕಿನಲ್ಲಿ ಯಾವುದೆ ಕೆಎಸ್ಸಾರ್ಟಿಸಿ ಬಸ್ಸುಗಳು ಓಡಾಟ ನಡೆಸಿಲ್ಲ. ಎಲ್ಲಾ ಬಸ್ಸುಗಳನ್ನು ಪುತ್ತೂರಿನ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ, ಖಾಸಗಿ ಬಸ್ಸು ನಿಲ್ದಾಣದಲ್ಲಿ ನಿಲುಗಡೆಗೊಳಿಸಲಾಗಿದೆ.
ಶಾಲಾ ಕಾಲೇಜುಗಳಿಗೆ ರಜೆಯಿಲ್ಲದ ಕಾರಣ ವಿದ್ಯಾರ್ಥಿಗಳು ಖಾಸಗಿ ಬಸ್ಸು ಮತ್ತು ಇನ್ನಿತರ ವಾಹನಗಳನ್ನು ಅವಲಂಬಿಸಿ ಶಾಲೆಗೆ ತೆರಳುತ್ತಿದ್ದರು. ಇದರಿಂದಾಗಿ ವಾಹನಗಳಲ್ಲಿ ಮಕ್ಕಳ ಸಂಖ್ಯೆ ತುಂಬಿತ್ತು. ಶಾಲಾ ಕಾಲೇಜ್‌ಗಳಲ್ಲಿಯೂ ಮಕ್ಕಳ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ವಿರಳವಾಗಿದೆ. ಬಸ್ಸು ನಿಲ್ದಾಣದಲ್ಲಿ ಇತರ ಜಿಲ್ಲೆಗಳಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಬೆರಳೆಣಿಕೆಯ ಮಂದಿ ಕಂಡು ಬಂದಿದ್ದು, ಬಸ್ಸುಗಳ ಓಡಾಟವಿಲ್ಲದೆ ಬಸ್ಸು ನಿಲ್ದಾಣ ಬಿಕೋ ಅನ್ನುತ್ತಿವೆ.
ಪುತ್ತೂರಿನಿಂದ ಉಪ್ಪಿನಂಗಡಿ, ಈಶ್ವರಮಂಗಲ, ಕುಂಬ್ರ ಇನ್ನಿತರ ಕಡೆಗಳಿಗೆ ಟೆಂಪೋ ಹಾಗೂ ಇನ್ನಿತರ ವಾಹನಗಳು ಪ್ರಯಾಣಿಕರನ್ನು ಸಾಗಾಟ ಮಾಡುತ್ತಿದ್ದವು. ಪುತ್ತೂರು ಬಸ್ಸು ನಿಲ್ದಾಣ ಸೇರಿದಂತೆ ನಗರ ಪ್ರದೇಶದಲ್ಲಿ ಬಿಗು ಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದೆ.





