ಈ 13 ವರ್ಷದ ಹುಡುಗನಿಗೆ ರಕ್ತವೇ ಕಣ್ಣೀರು !

ಇಂದೋರ್,ಜುಲೈ 25: ಮಧ್ಯಪ್ರದೇಶದ ಅಶೋಕ ನಗರ ಎಂಬಲ್ಲಿ ಹದಿಮೂರು ವರ್ಷ ವಯಸ್ಸಿನ ಅಖಿಲೇಶ್ ರಘುವಂಶಿ ಎಂಬ ಬಾಲಕ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಈ ರೋಗದಿಂದಾಗಿ ಅಖಿಲೇಶ್ ಸಂಕಟ ಅನುಭವಿಸುತ್ತಿದ್ದಾನೆ. ಜೊತೆಗೆ ಅವನ ಬದುಕು ತೀರಾ ಯಾತನಾ ಮಯವಾಗಿದೆ ಎಂದು ವರದಿಯಾಗಿದೆ.
ಅಖಿಲೇಶ್‌ನ ಶರೀರದ ಹಲವು ಅಂಗಗಳಲ್ಲಿ ತನ್ನಂತಾನೆ ರಕ್ತ ಸುರಿಯುತ್ತಿದೆ. ಎರಡು ವರ್ಷಗಳ ಹಿಂದೆ ಅವನ ಮೂಗಿನಿಂದ ರಕ್ತಸುರಿಯಲು ಆರಂಭವಾಗಿತ್ತು. ಈಗ ಅಖಿಲೇಶ್‌ನ ಕಣ್ಣಿಂದ ರಕ್ತ ಒಸರುತ್ತಿದೆ. ಇಷ್ಟೇ ಅಲ್ಲ ಮೂತ್ರ ಮತ್ತು ಶೌಚ ಮಾಡುವಾಗ ಕೂಡಾ ಕೆಲವೊಮ್ಮೆ ರಕ್ತ ಸುರಿಯುತ್ತಿದೆ ಎಂದು ವರದಿ ತಿಳಿಸಿದೆ.
ಈ ರೋಗದಿಂದಾಗಿ ಅಖಿಲೇಶ್ ನೋವಿನಿಂದ ಚಡಪಡಿಸುತ್ತಾನೆ. ಅವನನ್ನು ಭಿಂಡ್‌ನಿಂದ ದಿಲ್ಲಿಯವರೆಗೂ ಹಲವು ಆಸ್ಪತ್ರೆಗೆ ತೋರಿಸಲಾಗಿದ್ದು ಅವನ ರೋಗವನ್ನು ಪತ್ತೆಹಚ್ಚಲು ವೈದ್ಯರಿಂದ ಸಾಧ್ಯವಾಗಿಲ್ಲ. ಈ ರೋಗದಿಂದಾಗಿ ಶಾಲೆಗೆ ಹೋಗಲು ಅವನಿಗೆ ಸಾಧ್ಯವಾಗುವುದಿಲ್ಲ. ಆರ್ಥಿಕ ಸಮಸ್ಯೆಯಿಂದಾಗಿ ಅವನಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಅವನ ತಂದೆ ಅರುಣ್ ಅಸಮರ್ಥರಾಗಿದ್ದಾರೆ ಎಂದು ವರದಿಯಾಗಿದೆ.





