ಕೊಲೆ ಪ್ರಕರಣದ ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಮಂಗಳೂರು, ಜು. 25: ಮಹಿಳೆಯೊಂದಿಗೆ ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ ಮಹಿಳೆಯ ಪತಿ ,ಬಾಗಲಕೋಟೆಯ ಕಡ್ಲಮಟ್ಟಿ ಗ್ರಾಮದ ಸಿದ್ದಪ್ಪ (29)ಎಂಬವರನ್ನು ಕೊಲೆಗೈದ ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಉಮಾ ಎಂ.ಜಿ ವರು ತೀರ್ಪು ನೀಡಿದ್ದಾರೆ.
ಆರೋಪಿಗಳಾದ ಕಣ್ಣೂರು ಬಳ್ಕೂರುಗುಡ್ಡೆಯ ಮುಹಮ್ಮದ್ ಅನ್ಸರ್ (30), ಮುಹಮ್ಮದ್ ನೌಫಾಲ್ (23), ಮುಹಮ್ಮದ್ ಸಲೀಂ (26), ಅಬ್ದುಲ್ ಬಶೀರ್, ಅಬ್ದುಲ್ ನೌಶಿದ್ (32) ಜೀವಾವಧಿ ಶಿಕ್ಷೆಗೊಳಗಾದವರು. ಇವರಿಗೆ ಜೀವಾವಧಿ ಶಿಕ್ಷೆಯ ಜೊತೆ ಸಾಕ್ಷ ನಾಶಕ್ಕಾಗಿ 3 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು ತಲಾ ಹತ್ತು ಸಾವಿರ ರೂ. ದಂಡವನ್ನು ವಿಧಿಸಲಾಗಿದೆ.
ಬಾಗಲಕೋಟೆ ಕಡ್ಲಮಟ್ಟಿ ಗ್ರಾಮದ ಕಸ್ತೂರಿ ಯಾನೆ ರೇಣುಕಾ ಮಂಗಳೂರಿನಲ್ಲಿ ಕೂಲಿ ಕೆಲಸಕ್ಕೆ ಪತಿ ಸಿದ್ದಪ್ಪನೊಂದಿಗೆ ಬಂದಿದ್ದಳು. ಆರೋಪಿ ಮುಹಮ್ಮದ್ ಅನ್ಸರ್ ಜೊತೆ ಅನೈತಿಕ ಸಂಬಂಧವನ್ನು ಇರಿಸಿಕೊಂಡಿದ್ದಳು ಎಂದು ಮೃತ ಸಿದ್ದಪ್ಪ ಹಲವರಲ್ಲಿ ತನ್ನ ನೋವನ್ನು ತೋಡಿಕೊಂಡಿದ್ದ ಎನ್ನಲಾಗಿದೆ. 2007ರ ಫೆ.6 ರಂದು ಆರೋಪಿಗಳು ಕಸ್ತೂರಿಯೊಂದಿಗೆ ಸೇರಿ ಸಿದ್ದಪ್ಪನನ್ನು ಕೊಲೆಗೈಯಲು ಸಂಚನ್ನು ಹೂಡಿ, ಸಿದ್ದಪ್ಪನನ್ನು ಕಣ್ಣೂರು ಬಳ್ಕೂರುಗುಡ್ಡೆಗೆ ಕರೆದುಕೊಂಡು ಹೋಗಿ ಕೊಲೆ ಮಾಡಿ ಹೆಣವನ್ನು ಅಲ್ಲಿಯೆ ಹೂತು ಹಾಕಿದ್ದರು.
ಸಿದ್ದಪ್ಪ ಆಗಾಗ ಊರಿಗೆ ತೆರಳುತ್ತಿದ್ದು ಮೂರು ವರ್ಷಗಳಿಂದ ಊರಿಗೆ ಬಾರದ ಹಿನ್ನೆಲೆಯಲ್ಲಿ ಆತನ ತಮ್ಮ ಬಸಪ್ಪ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಈ ಬಗ್ಗೆ ಕಸ್ತೂರಿಯನ್ನು ವಿಚಾರಣೆ ನಡೆಸಿದಾಗ ಆರೋಪಿಗಳೊಂದಿಗೆ ಸೇರಿ ಸಿದ್ದಪ್ಪನನ್ನು ಕೊಲೆಗೈದಿರುವ ಬಗ್ಗೆ ಮಾಹಿತಿ ನೀಡಿದ್ದಳು. ಕಸ್ತೂರಿಯ ತಪ್ಪೊಪ್ಪಿಗೆ ಹೇಳಿಕೆಯ ಆಧಾರದಲ್ಲಿ ಇತರ ಆರೋಪಿಗಳನ್ನು ಬಂಧಿಸಲಾಗಿತ್ತು.
ಈ ಬಗ್ಗೆ ವಾದ ವಿವಾದ ಆಲಿಸಿದ ನ್ಯಾಯಾಲಯ ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಕಸ್ತೂರಿ ತಲೆತಪ್ಪಿಸಿಕೊಂಡಿರುವುದರಿಂದ ಅವಳ ವಿರುದ್ದ ಪ್ರಕರಣವನ್ನು ಪ್ರತ್ಯೇಕಿಸಲಾಗಿದೆ. ಸರಕಾರದ ಪರ ಸರಕಾರಿ ಅಭಿಯೋಜಕ ಕೆ.ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.







