ಸಾತ್ವಿಕತೆ ಮತ್ತು ಸಾಧನಾಶೀಲತೆಯನ್ನು ಮಕ್ಕಳಿಗೆ ತಿಳಿಸಿಕೊಡುವ ಅಗತ್ಯವಿದೆ: ಕಲ್ಕೂರ

ಮಂಗಳೂರು, ಜು. 25: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಂಗಳೂರು ತಾಲೂಕು ಘಟಕದ ವತಿಯಿಂದ ರಥಬೀದಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ‘ಪಂಜೆ ಮಂಗೇಶರಾಯ ಅನುಸಂಧಾನ’ ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾತ್ವಿಕತೆ ಮತ್ತು ಸಾಧನಾಶೀಲತೆಯನ್ನು ಮಕ್ಕಳಿಗೆ ತಿಳಿಸಿಕೊಡುವ ಅಗತ್ಯವಿದೆ. ಅವರ ಪ್ರತಿಭೆ ಮತ್ತು ಸಾತ್ವಿಕ ಚಿಂತನೆಯನ್ನು ಒಗ್ಗೂಡಿಸಿ ಸಮಾಜದ ಆಸ್ತಿಗಳಾಗಿ ಪರಿವರ್ತಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ನೇಗಿಲಯೋಗಿಯ ಆಂತರ್ಯದಲ್ಲಿರುವ ಜ್ಞಾನಪ್ರಭೆ ಪ್ರಸ್ತುತ ಶೇ.100 ಅಂಕ ಗಳಿಸಿ ಸಾಧನೆ ಮಾಡುವ ವಿದ್ಯಾರ್ಥಿಗಳಲ್ಲಿ ಇರದು. ಮಕ್ಕಳನ್ನು ಕೇವಲ ಅಂಕ ಗಳಿಕೆಗೆ ಸೀಮಿತಗೊಳಿಸದೇ ಅವರ ಸಾಮಾನ್ಯ ಜ್ಞಾನ ಪ್ರಪಂಚವನ್ನು ವಿಸ್ತಾರಗೊಳಿಸಬೇಕು. ಪಂಜೆ ಮಂಗೇಶರಾಯ ಅವರಂತಹ ಮೇರು ವ್ಯಕ್ತಿತ್ವದ ಪರಿಚಯ ಇಂದಿನ ಪೀಳಿಗೆಗೆ ಅಗತ್ಯವಾಗಿ ಹೇಳಿಕೊಡಬೇಕು. ಆ ಮೂಲಕ ಅವರು ತಮ್ಮ ಸಾಧನೆ ಮತ್ತು ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳುವಂತಾಗಬೇಕು ಎಂದು ಅವರು ಹೇಳಿದರು.
ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ರಾಜೀವಿ ಕೆ., ಸಾರಸ್ವತ ವಿದ್ಯಾಸಂಸ್ಥೆ ಯ ಕಾರ್ಯದರ್ಶಿ ಮಹೇಶ್ ಬೊಂಡಾಲ, ಸಾಹಿತಿ ರಘು ಇಡ್ಕಿದು ಮತ್ತಿತರರು ಉಪಸ್ಥಿತರಿದ್ದರು.
ವಿಜಯಲಕ್ಷ್ಮಿ ಶೆಟ್ಟಿ ಸ್ವಾಗತಿಸಿದರು.ಇದೇ ಸಂದರ್ಭದಲ್ಲಿ ಕಸಾಪ ಮಂಗಳೂರು ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ನಡೆಯಿತು.







