ಸುಳ್ಯ: ಕಾನ -ಬಾಣೆ -ಕುಮ್ಕಿ ಜಮೀನನ್ನು ರೈತರಿಗೆ ನೀಡಲು ಹಕ್ಕೊತ್ತಾಯ
.jpg)
ಸುಳ್ಯ, ಜು.25: ಭಾರತೀಯ ಜನತಾ ಪಾರ್ಟಿಯ ಸುಳ್ಯ ಮಂಡಲ ಸಮಿತಿಯ ಕಾರ್ಯಕಾರಣಿ ಸಭೆಯು ಸುಳ್ಯದ ಶ್ರೀವೆಂಕಟ್ರಮಣ ದೇವ ಮಂದಿರದ ಸಭಾಂಗಣದಲ್ಲಿ ನಡೆಯಿತು.
ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ಸುಳ್ಯದ ಬಿಜೆಪಿಯಲ್ಲಿ ಪರಿವಾರದಿಂದ ಬಂದ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಇಲ್ಲಿ ಪಕ್ಷ ಗಟ್ಟಿಯಾಗಿದೆ. ಹಾಗಾಗಿ ಐದು ಅವಧಿಯಲ್ಲಿ ವಿಧಾನ ಸಬೆಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದೆ. ಪಕ್ಷದ ಹಿರಿಯರು ಹಾಕಿಕೊಟ್ಟ ಯೋಜನೆ ಹಾಗೂ ಯೋಚನೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಸಮಿತಿಯದ್ದು. ಇಲ್ಲಿ ದೇಶ ಮೊದಲು ಬಳಿಕ ಪಕ್ಷ ಆ ನಂತರ ಕಾರ್ಯಕರ್ತ ಎಂಬ ಸಿದ್ಧಾಂತ ಇದೆ. ಇದು ಎಲ್ಲಾ ಕಾರ್ಯಕರ್ತರಿಗೂ ಗೊತ್ತಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿ ಬಿಡುಗಡೆ ಮಾಡಿದರು. ಶಕ್ತಿಕೇಂದ್ರಗಳಿಗೆ ಮಂಡಲ ಹಾಗೂ ಜಿಲ್ಲಾ ಸಮಿತಿ ಸದಸ್ಯರನ್ನು ಪ್ರಭಾರಿಗಳಾಗಿ ನೇಮಿಸಿದ್ದು, ಆ ಪಟ್ಟಿಯನ್ನೂ ಬಿಡುಗಡೆ ಮಾಡಿದರು. ಕಾನ-ಬಾಣೆ-ಕುಮ್ಕಿ ಭೂಮಿಯನ್ನು ರೈತರ ಹೆಸರಿಗೆ ಮಾಡುವಂತೆ ಸಭೆಯಲ್ಲಿ ಹಕ್ಕೊತ್ತಾಯ ಮಾಡಲಾಯಿತು.
ಪಕ್ಷದ ರಾಜ್ಯ ಕಾರ್ಯಕಾರಣಿ ಸದಸ್ಯ, ಶಾಸಕ ಎಸ್.ಅಂಗಾರ, ಜಿಲ್ಲಾ ಘಟಕ ಉಪಾಧ್ಯಕ್ಷೆ ಭಾಗೀರಥಿ ಮುರುಳ್ಯ, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಮಂಡಲ ಸಮಿತಿ ನಿಕಟಪೂರ್ವ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಹೆಗ್ಡೆ, ಕಿಶೋರ್ ಶಿರಾಡಿ ವೇದಿಕೆಯಲ್ಲಿದ್ದರು.
ಯುವ ಮೋರ್ಚಾ ಅಧ್ಯಕ್ಷ ವಿನಯ ಕುಮಾರ್ ಮುಳುಗಾಡು ಸ್ವಾಗತಿಸಿ, ಪ್ರಕಾಶ್ ಹೆಗ್ಡೆ ವಂದಿಸಿದರು. ಮುರಳಿಕೃಷ್ಣ ಚಳ್ಳಂಗಾರು ಕಾರ್ಯಕ್ರಮ ನಿರೂಪಿಸಿದರು.
ಪಕ್ಷ ಬಲವರ್ಧನೆಗೆ ಮನ-ಮನೆ ಪ್ರವಾಸ
ಪಕ್ಷದ ಯೋಜನೆಗಳನ್ನು ಜನರಿಗೆ ತಲುಪಿಸಲು ಹಾಗೂ ಪಕ್ಷದ ಬಲವರ್ಧನೆಗೆ ಮನೆಮನೆ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ.
ಮಂಡಲ ಸಮಿತಿ ವ್ಯಾಪ್ತಿಯಲ್ಲಿ 47 ಗ್ರಾಮಗಳಿದ್ದು, 225 ವಾರ್ಡು ಸಮಿತಿಗಳಿವೆ. ಎಲ್ಲಾ ಸಮಿತಿಗಳನ್ನು ಬಲಗೊಳಿಸಲಾಗುವುದು. ಯಡಿಯೂರಪ್ಪ ಸರಕಾರ ಇದ್ದಾಗ ನೀಡಿದ್ದ ಯೋಜನೆಗಳನ್ನು ಹಾಗೂ ಕೇಂದ್ರದ ಮೋದಿ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಮೂಲಕ ಮುಂದಿನ ಒಂದೂವರೆ ವರ್ಷದೊಳಗೆ ಬರುವ ವಿಧಾನ ಸಬಾ ಚುನಾವಣೆಯಲ್ಲಿ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಪಕ್ಷದ ಅ್ಯರ್ಥಿಯನ್ನು ಗೆಲ್ಲಿಸುವ ನಿರ್ಧಾರವನ್ನು ಮಾಡಿದ್ದಾಗಿ ಅವರು ಹೇಳಿದರು.
94 ಸಿ ಹಕ್ಕುಪತ್ರಕ್ಕೆ ದುಬಾರಿ ದರ ವಿಧಿಸಲಾಗಿದೆ. ಹಾಗಾಗಿ ಈ ಯೋಜನೆಯೂ ವಿಫಲವಾಗಿದೆ. ರಾಜ್ಯ ಸರಕಾರದ ವೈಫಲ್ಯಗಳ ಕುರಿತು ಮುಂದಿನ ದಿನಗಳಲ್ಲಿ ಹೋರಾಟ ಆರಂಭಿಸಲಿದ್ದು, ಜನತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಎಸ್.ಅಂಗಾರ , ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಹೆಗ್ಡೆ, ಕಿಶೋರ್ ಶಿರಾಡಿ, ಸಮಿತಿ ನಿಕಟಪೂರ್ವಾಧ್ಯಕ್ಷ ಹರೀಶ್ ಕಂಜಿಪಿಲಿ, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಕಣೆಮರಡ್ಕ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







