ಮಹಿಳೆಯರ ವಿರುದ್ಧ ಅಪರಾಧ ತಡೆಗೆ ಶರಿಯಾದಂತಹ ಕಾನೂನು ಅಗತ್ಯ: ರಾಜ್ ಠಾಕ್ರೆ

ಮುಂಬೈ, ಜು.25: ಅಹ್ಮದ್‌ನಗರದಲ್ಲಿ ನಡೆದ ಹದಿಹರೆಯದ ಹುಡುಗಿಯೊಬ್ಬಳ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆಯ ಕುರಿತಾಗಿ ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಹಾರಾಷ್ಟ್ರ ನವನಿರ್ಮಾಣ ಸೇನಾ(ಎಂಎನ್‌ಎಸ್) ವರಿಷ್ಠ ರಾಜ್ ಠಾಕ್ರೆ, ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಗಂಭೀರ ಅಪರಾಧಗಳ ತಡೆಗೆ ಶರಿಯಾದಂತಹ(ಇಸ್ಲಾಮಿಕ್) ಕಾನೂನೊಂದರ ಅಗತ್ಯವಿದೆಯೆಂದು ಅಭಿಪ್ರಾಯಿಸಿದ್ದಾರೆ.
ಅಪ್ರಾಪ್ತ ವಯಸ್ಸಿನವರು ಹಾಗೂ ಮಹಿಳೆಯರನ್ನು ಅತ್ಯಾಚಾರ ಹಾಗೂ ಹತ್ಯೆ ನಡೆಸುವವರ ಕೈ ಹಾಗೂ ಕಾಲುಗಳನ್ನು ಕತ್ತರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಜು.13ರಂದು ಅಹ್ಮದ್‌ನಗರ ಜಿಲ್ಲೆಯ ಕೋಪರ್ಡಿ ಗ್ರಾಮದಲ್ಲಿ 15ರ ಹರೆಯದ ಬಾಲಕಿಯೊಬ್ಬಳನ್ನು ಮೂವರು ವ್ಯಕ್ತಿಗಳು ಅತ್ಯಾಚಾರವೆಸಗಿ ಕೊಂದಿದ್ದರು.
ಇಂತಹ ಘಟನೆಗಳು ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕುಸಿದಿರುವುದರ ಫಲಿತಾಂಶವಾಗಿದೆ. ಹಾಲಿ ಸರಕಾರವು ಹಿಂದಿನ ಕಾಂಗ್ರೆಸ್-ಎನ್‌ಸಿಪಿ ನೇತೃತ್ವದ ಸರಕಾರಕ್ಕಿಂತಲೂ ಕೆಟ್ಟದೆಂದು ಸಾಬೀತುಪಡಿಸುತ್ತಿದೆಯೆಂದು ರಾಜ್ ಹೇಳಿದ್ದಾರೆ.
ಅವರು ಇಂದು ಮುಂಜಾನೆ ಕರ್ಜತ್ ತಹಶೀಲ್‌ನ ಕೋಪರ್ಡಿ ಗ್ರಾಮದಲ್ಲಿ ಮೃತ ಬಾಲಕಿಯ ಕುಟುಂಬವನ್ನು ಭೇಟಿಯಾಗಿ, ಸಂತಾಪ ಸೂಚಿಸಿದ ಬಳಿಕ ಈ ಮಾತುಗಳನ್ನಾಡಿದ್ದಾರೆ.
ಮಹಿಳೆಯರು ಹಾಗೂ ಮಕ್ಕಳ ವಿರುದ್ಧ ಗಂಭೀರ ಅಪರಾಧಗಳನ್ನು ತಡೆಯಲು ಶರಿಯಾದಂತಹ ಕಾನೂನನ್ನು ಸೃಷ್ಟಿಸುವ ತುರ್ತು ಅಗತ್ಯವಿದೆ. ಸಮಾಜ ವಿರೋಧಿ ಶಕ್ತಿಗಳು ಭಯೋತ್ಪಾದನೆಯಂತಹ ಪರಿಸ್ಥಿತಿಯನ್ನು ನಿರ್ಮಿಸುತ್ತಿವೆ. ಕಾನೂನನ್ನು ಕಠಿಣಗೊಳಿಸುವ ಅಗತ್ಯವಿದೆಯೆಂದು ರಾಜ್‌ಠಾಕ್ರೆ ಅಭಿಪ್ರಾಯಿಸಿದ್ದಾರೆ.
ಎಸ್ಸಿ-ಎಸ್ಟಿ(ದೌರ್ಜನ್ಯ ತಡೆ) ಕಾಯ್ದೆ ದುರುಪಯೋಗ ತಡೆಗೆ ಅಗತ್ಯ ಬದಲಾವಣೆಗಳನ್ನು ಮಾಡುವಂತೆಯೂ ಅವರು ಸಲಹೆ ನೀಡಿದ್ದಾರೆ.







